ಚಾಮರಾಜನಗರ: ಪವಾಡ ಪುರುಷ ನೆಲೆಸಿರುವ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 95 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪ್ರಾಧಿಕಾರ ರಂಗಮಂದಿರದಲ್ಲಿ ಇಂದು ಬೆಳಿಗ್ಗೆ 9.20ರಿಂದ 10.10ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿತು.
ತಮಿಳುನಾಡು ಸೇರಿದಂತೆ ರಾಜ್ಯದ ಚಾಮರಾಜನಗರ, ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೊಡಗು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ ಪರಿಣಾಮ 15 ವರ್ಷಗಳ ನಂತರ 95 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಧುವಿಗೆ ನಾಲ್ಕು ಗ್ರಾಂ ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಸೀರೆ, ರವಿಕೆ, ವರನಿಗೆ ಪಂಚ್ ಶರ್ಟ್, ಪೇಟವನ್ನು ನೀಡಲಾಗಿತ್ತು.
ಇನ್ನು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪ್ರಯುಕ್ತ ಶ್ರೀ ಮಹದೇಶ್ವರ ಸ್ವಾಮಿಯ ಹೊರ, ಒಳ ಆವರಣ, ರಾಜಗೋಪುರ, ಅತಿಥಿ ಗಣ್ಯರ ಮುಖ್ಯದ್ವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿವಿಧ ಬಗೆಯ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ಶಾಸಕ ಎಂ.ಆರ್.ಮಂಜುನಾಥ್, ಮಹದೇಶ್ವರ ಬೆಟ್ಟದ ಪ್ರಾಧಿಕಾರ ಕಾರ್ಯದರ್ಶಿ ಎ.ಇ.ರಘು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





