ಹನೂರು: ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ರೈತರು ಬೆಳೆದ ಫಸಲು ನಾಶವುಂಟಾಗಿ ಲಕ್ಷಾಂತರ ರೂ. ನಷ್ಟವಾಗಿದೆ.
ಮುನಿಗುಡಿದೊಡ್ಡಿ ಗ್ರಾಮದ ಮಹದೇವಪ್ಪ, ಚಿಕ್ಕಹುಣಸೆಪಾಳ್ಯ ಗ್ರಾಮದ ಪ್ರೇಮ ಎಂಬ ರೈತರು ಬೆಳೆದ ಬೆಳ್ಳುಳ್ಳಿ, ಕೋಸು, ಬೀನ್ಸ್ ಮತ್ತು ಜೋಳವನ್ನು ಕಾಡಾನೆಗಳು ನಾಶಪಡಿಸಿವೆ.
ಕಳೆದ ಒಂದು ತಿಂಗಳಿನಿಂದ ಮಲೆಮಹದೇಶ್ವರ ವನ್ಯದಾಮದಿಂದ ಬಿ ಆರ್ ಟಿ ಅರಣ್ಯ ಪ್ರದೇಶಕ್ಕೆ ಸಂಚರಿಸುವ ಕಾಡಾನೆಗಳು ಈ ಭಾಗದ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಗೊಳಿಸುತ್ತಿವೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ.
ಮುಂದಿನ ದಿನಗಳಲ್ಲಿ ಇದು ಹೀಗೆಯೇ ಮುಂದುವರಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.