ಗುಂಡ್ಲುಪೇಟೆ : ತಾಲ್ಲೂಕಿನ ಮುಕ್ತಿ ಕಾಲೋನಿ ಗ್ರಾಮದ ಜಮೀನೊಂದರ ಬಾಳೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು ಜನರು ಕಿರುಚಾಡಿ, ಪಟಾಕಿ ಸಿಡಿಸಿದರೂ ಅದು ಎಲ್ಲಿಯೂ ಹೋಗಿಲ್ಲ. ಹೀಗಾಗಿ ಅದು ಗಾಯಗೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಮುಕ್ತಿ ಕಾಲೋನಿಯ ಬಾಳೆ ಬೆಳೆಯ ಮಧ್ಯದಲ್ಲಿ ಬೆಳಿಗ್ಗೆ ೮.೩೦ ರಲ್ಲಿ ಹುಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ತೆರಳಿದ್ದು, ಅರಿವಳಿಕೆ ತಜ್ಞರು ಹಾಗೂ ವೈದ್ಯರ ನೆರವಿನಿಂದ ಹುಲಿ ಸೆರೆ ಹಿಡಿಯಲಾಗುವುದು ಎಂದು ಮದ್ದೂರು ವಲಯಾಧಿಕಾರಿ ಪುನೀತ್ ತಿಳಿಸಿದರು.
ಹುಲಿ ಇರುವ ಬಗ್ಗೆ ತಿಳಿಯುತಿದ್ದಂತೆ ಸಾರ್ವಜನಿಕರು ಜಮಾಯಿಸಿದ್ದರು. ಹುಲಿ ಜನರ ಮೇಲೆ ಎರಗುವ ಲಕ್ಷಣವಿದ್ದು, ಕಾರ್ಯಾಚರಣೆ ಮಾಡುವವರೆಗೂ ದೂರವಿರುವಂತೆ ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ.





