ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು ಸೆರೆ ಹಿಡಿದರೆ ಮತ್ತೊಂದೆಡೆ ಹುಲಿ ದಾಳಿ ನಡೆಸಿ ಜಾನುವಾರುಗಳನ್ನು ಕೊಂದಿರುವ ಘಟನೆಯಿಂದ ರೈತರಲ್ಲಿ ಆತಂಕ ಉಂಟುಮಾಡಿದೆ.
ತಾಲ್ಲೂಕಿನ ಬೊಮ್ಮಲಾಪುರ ಸುತ್ತಲಿನ ಗ್ರಾಮಗಳ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತ ಜನರಿಗೆ ಆತಂಕ ಸೃಷ್ಟಿಸುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಮೂಲಕ ಸೆರೆ ಹಿಡಿಯಲಾಗಿದೆ.
ಮೂರು ವರ್ಷಗಳಿಂದ ಬೊಮ್ಮಲಾಪುರ ಭಾಗದಲ್ಲಿ ಕಾಣಿಸಿಕೊಳ್ಳುತ್ತ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆಗೆ ಒತ್ತಾಯಿಸಿ ರೈತರು ಅರಣ್ಯ ಸಿಬ್ಬಂದಿಯನ್ನು ಬೋನಿನಲ್ಲಿ ಕೂಡಿಹಾಕಿದ್ದ ಘಟನೆ ಕೂಡ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆದರೆ ಅರಣ್ಯ ಇಲಾಖೆಯ ಬೋನಿಗೆ ಬೀಳದ ಹುಲಿ ಜಮೀನುಗಳಲ್ಲಿ ಬಿಡುಬಿಟ್ಟು ಜಾನುವಾರುಗಳನ್ನು ಕೊಲ್ಲುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆ ಹಾಗೂ ಸಿಬ್ಬಂದಿ ನೆರವಿನಿಂದ ಬುಧವಾರ ರಾತ್ರಿ ಕಾರ್ಯಾಚರಣೆ ಕೈಗೊಂಡಿತು.
ಥರ್ಮಲ್ ಡ್ರೋಣ್ ಹಾರಿಸಿ ಹುಲಿಯ ಇರುವಿಕೆ ಪತ್ತೆಹಚ್ಚಿದ ನಂತರ ಪಶು ವೈದ್ಯರಾದ ವಾಸಿಂ ಹಾಗೂ ಗುರುಸ್ವಾಮಿ ಹುಲಿಗೆ ಅರಿವಳಿಕೆ ನೀಡಿ ಪ್ರಜ್ಞೆ ತಪ್ಪಿಸಿ ಸೆರೆಹಿಡಿದು ಬಂಡೀಪುರ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.





