ಗುಂಡ್ಲುಪೇಟೆ : ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಒತ್ತಾಯಿಸಿ, ಆಕೆ ಒಲ್ಲೆ ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈಗ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ ಗುಂಡ್ಲುಪೇಟೆಯ ಜೆ.ಎಸ್.ಎಸ್. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ಗುಂಡ್ಲುಪೇಟೆ ಪಟ್ಟಣದ ಅಯೂಬ್ ಎಂಬಾತನ ಪರಿಚಯವಾಗಿತ್ತು. ನಂತರ ವಿದ್ಯಾರ್ಥಿನಿ ಮೈಸೂರಿನ ಕಾಲೇಜಿಗೆ ಬಿಎ ಓದಲು ಸೇರಿಕೊಂಡಿದ್ದು, ಪ್ರತಿದಿನ ಊರಿನಿಂದ ಕಾಲೇಜಿಗೆ ಹೋಗಿ ಬರುತ್ತಿದ್ದರು.
ಆ.೨೧ರಂದು ಮೈಸೂರಿಗೆ ಕಾಲೇಜಿಗೆ ಹೋಗಿ, ತರಗತಿ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ಗುಂಡ್ಲುಪೇಟೆ ಬಸ್ ನಿಲ್ದಾಣಕ್ಕೆ ಸಂಜೆ ಸುಮಾರು ೫ ಗಂಟೆಗೆ ಬಂದ ವೇಳೆಯಲ್ಲಿ ಅಯೂಬ್ ನನ್ನನ್ನು ಹಿಂಬಾಲಿಸಿಕೊಂಡು ಬಂದು ‘ನನ್ನನ್ನು ನೀನು ಏಕೆ ಮಾತನಾಡಿಸುವುದಿಲ್ಲ. ನೀನು ಎಂದರೆ ನನಗೆ ಇಷ್ಟ’ ಎಂದ. ನಾನು ಇವೆಲ್ಲಾ ಬೇಡ ಎಂದರೂ ಕೇಳದೆ ನನ್ನನ್ನು ಹಿಂಬಾಲಿಸಿ ನನಗೆ ತೊಂದರೆ ಕೊಡುತ್ತಿದ್ದನು. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.
ಪಟ್ಟಣ ಪೊಲೀಸರು ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ, ನಂತರ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.





