ಗುಂಡ್ಲುಪೇಟೆ : ತಾಲ್ಲೂಕಿನ ಶಿವಪುರ ಗ್ರಾಮದ ಪೊನ್ನಸ್ವಾಮಿ ಎಂಬವರ ಹೊಲದಲ್ಲಿ ಕಟ್ಟಿಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದು ತಿಂದಿರುವ ಘಟನೆ ನಡೆದಿದೆ.
ಶಿವಪುರ ಗ್ರಾಮದ ಪೊನ್ನಸ್ವಾಮಿ ಅವರು ಹೊಲದಲ್ಲಿ ದನಕರುವನ್ನು ಕಟ್ಟಿಹಾಕಿದ್ದರು. ಶುಕ್ರವಾರ ತಡರಾತ್ರಿ ಚಿರತೆ ದಾಳಿ ಮಾಡಿ ಒಂದು ವರ್ಷದ ಕರುವನ್ನು ಕೊಂದು, ಎಳೆದುಕೊಂಡು ಹೋಗಿ ತಿಂದಿದೆ. ಶನಿವಾರ ಬೆಳಿಗ್ಗೆ ಕರು ಕಾಣದಿದ್ದಾಗ ಹುಡುಕಾಡಿದ ಸಮಯದಲ್ಲಿ ಚಿರತೆ ತಿಂದುಹಾಕಿರುವುದು ಬೆಳಕಿಗೆ ಬಂದಿದೆ.
ಚಿರತೆ ದಾಳಿಯಿಂದಾಗಿ ಶಿವಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ಕೂಲಿಕಾರ್ಮಿಕರು ಕೃಷಿ ಕೆಲಸಕ್ಕೆಂದು ಹೊಲಗಳಿಗೆ ಹೋಗಿ ಬರಲು ಆತಂಕ ಪಡುತ್ತಿದ್ದಾರೆ. ದನಕರು ಮೇಯಿಸಲು ಕಾಡಿಗೆ ಹೋಗುವವರಿಗೂ ಭೀತಿ ಎದುರಾಗಿದೆ. ಶೀಘ್ರದಲ್ಲಿ ಅರಣ್ಯ ಇಲಾಖೆಯವರು ಚಿರತೆ ಸೆರೆಹಿಡಿದು ಆತಂಕ ನಿವಾರಿಸಬೇಕು ಎಂದು ರೈತ ಮುಖಂಡ ಕುಮಾರ್ ಹಾಗೂ ಸ್ಥಳೀಯರು ಮನವಿ ಮಾಡಿದ್ದಾರೆ.





