ಚಾಮರಾಜನಗರ: ಐತಿಹಾಸಿಕ ಚಾಮರಾಜೇಶ್ವರಸ್ವಾಮಿಯ ರಥೋತ್ಸವವು ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಆಷಾಢ ಮಾಡದಲ್ಲಿ ನಡೆಯುವ ಏಕೈಕ ರಥೋತ್ಸವ ಇದಾಗಿದ್ದು, ಈ ಉತ್ಸವದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಭಾಗವಹಿಸಿ ಚಾಮರಾಜೇಶ್ವರನ ದರ್ಶನ ಪಡೆದು ಪುನೀತರಾದರು.
ಬಣ್ಣ, ಬಣ್ಣದ ಬಾವುಟಗಳಿಂದ, ಬೃಹತ್ ಹೂವಿನ ಹಾರಗಳಿಂದ ಕಂಗೊಳಿಸುತ್ತಿದ್ದ ರಥದಲ್ಲಿ ಅಲಂಕೃತ ಕೆಂಪನಂಜಾಂಬ ಸಹಿತ ಚಾಮರಾಜೇಶ್ವರ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಬಳಿಕ ಚಾಮರಾಜೇಶ್ವರ ರಥೋತ್ಸವಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಈ ವೇಳೆ ಚಾಮರಾಜೇಶ್ವರ ಸ್ವಾಮಿಯನ್ನು ಹೊತ್ತ ಮುಖ್ಯ ರಥ ಮುಂದೆ ಸಾಗಿತು. ಭಕ್ತರು ಭಕ್ತಿಯಿಂದ ರಥಕ್ಕೆ ಬಾಳೆಹಣ್ಣು-ಜವನ ಎಸೆದು ಭಕ್ತಿ ಸಮರ್ಪಿಸಿದರು.





