ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಜಿಲ್ಲಾ ಕೃಷಿಕ ಸಮಾಜ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರೈತರ ದಿನಾಚರಣೆ ಮತ್ತು ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ದೇಶಕ್ಕೆ ಅನ್ನದಾತರಾಗಿರುವ ರೈತರೊಂದಿಗೆ ಜೊತೆಯಲ್ಲಿ ನಿರಂತರವಾಗಿ ಇದ್ದೇವೆ. ರೈತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ದವಾಗಿದೆ. ಮುಖ್ಯಮಂತ್ರಿಯವರು ಸಹ ರೈತ ಕುಟುಂಬದಿಂದ ಬಂದವರೇ ಆಗಿದ್ದು, ರೈತರ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಅರಿವಿದೆ. ರೈತಪರ ಯೋಜನೆ ಜಾರಿಗೆ ಒತ್ತು ನೀಡಲಾಗಿದೆ. ರೈತರ ಹಿತ ಕಾಪಾಡುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಸಿರಿಧಾನ್ಯ ಇಂದು ಬದುಕಿಗೆ ಬಹುಮುಖ್ಯ ವಾಗಿದೆ. ಆರೋಗ್ಯ ಕಾಳಜಿಯಿಂದ ಸಿರಿಧಾನ್ಯಗಳ ಬಗ್ಗೆ ಒಲವು ಹೆಚ್ಚಾಗಿದ್ದು, ಬೇಡಿಕೆಯೂ ಸಹ ಇದೆ. ಸಿರಿಧಾನ್ಯ ಬೆಳೆಯಲು ಬಳಸಲು ಪ್ರೋತ್ಸಾಹ ನೀಡಲಾಗುತ್ತಿದೆ. ರೈತ ಸಮುದಾಯದ ಕಾರ್ಯಕ್ರಮಗಳಿಗೆ ವಿಶೇಷ ಗಮನಕೊಡಲಾಗುತ್ತಿದೆ. ರೈತ ದಿನಾಚರಣೆ, ಸಿರಿಧಾನ್ಯ ಹಬ್ಬದಲ್ಲಿ ಪಾಲ್ಗೊಂಡಿರುವುದು ನನಗೆ ಸಂತಸ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಈ ಹಿಂದೆ ಮಳೆಯಾಶ್ರಿತ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯಲಾಗುತ್ತಿತ್ತು. ಕ್ರಮೇಣ ನೀರಾವರಿ ಸೌಲಭ್ಯಗಳು ಹೆಚ್ಚಾದಾಗ ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ತೋಟಗಾರಿಕೆ ಬೆಳೆಗೂ ಹೆಚ್ಚು ಒತ್ತು ನೀಡಲಾಗಿದೆ. ಸರ್ಕಾರ ಕೃಷಿ ಜೊತೆಗೆ ಹೈನುಗಾರಿಕೆ, ಮೀನುಗರಿಕೆಯಂತಹ ಕಸುಬುಗಳಿಗೂ ಉತ್ತೇಜನ ನೀಡುತ್ತಿದೆ ಎಂದರು.
ಇದನ್ನೂ ಓದಿ:-ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್
ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ ರಾಷ್ಟ್ರದ ಪ್ರಧಾನಿಯಾಗಿದ್ದ ಚೌಧರಿ ಚರಣ್ ಸಿಂಗ್ ಅವರು ಕೃಷಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟರು. ಇವರ ಜನ್ಮದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ. ರೈತ ಚಳುವಳಿಯ ಹೋರಾಟಗಾರರಾದ ರೈತ ಮುಖಂಡರಾದ ಪ್ರೊ. ನಂಜುಂಡಸ್ವಾಮಿ ಅವರು ರೈತರ ಪರವಾಗಿ ದಿಟ್ಟ ಹೋರಾಟ ನಡೆಸಿ ರೈತರ ಧ್ವನಿಯಾಗಿದ್ದರು. ಇವರೆಲ್ಲರನ್ನು ಇಂದು ಸ್ಮರಿಸುವ ಸುದಿನವಾಗಿದೆ ಎಂದರು.
ರೈತ ಮುಖಂಡರಾದ ಹೊನ್ನೂರ್ ಪ್ರಕಾಶ್ ಅವರು ಮಾತನಾಡಿ, ನೈಸರ್ಗಿಕ ಸಾವಯವ ಕೃಷಿಗೆ ಸಬ್ಸಿಡಿ ನೀಡುವ ಮೂಲಕ ನೆಲ, ಜಲ ಉಳಿಸಬೇಕಿದೆ. ಇತರೆ ಬೆಳೆಗಳ ನಡುವೆ ಸಿರಿಧಾನ್ಯವನ್ನು ಬೆಳೆಯಬೇಕು. ರೈತರಿ ತಮಗೆ ಬೇಕಾದ ಎಲ್ಲಾ ಬಗೆಯ ಬೆಳೆಗಳನ್ನು ಬೆಳೆದುಕೊಳ್ಳಬೇಕು. ಮೌಲ್ಯವರ್ಧನೆಗೂ ಒತ್ತು ನೀಡಿದಾಗ ಹೆಚ್ಚು ಲಾಭ ಪಡೆಯಲು ಅನುಕೂಲವಾಗಲಿದೆ ಎಂದರು.
ಮತ್ತೋರ್ವ ಮುಖಂಡರಾದ ಅಣಗರ್ಳಳಿ ಬಸವರಾಜು ಅವರು ಮಾತನಾಡಿ, ರೈತರಿಗೆ ಹೆಚ್ಚು ಸೌಲಭ್ಯಗಳು ತಲುಪಬೇಕು. ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಇತ್ತೀಚೆಗೆ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದ್ದು, ವನ್ಯ ಜೀವಿಗಳ ಉಪಟಳ ತಡೆಯಬೇಕು ಎಂದರು.
ಇದೇ ವೇಳೆ ಹಾರ್ವೇಸ್ಟ್ ಹಬ್ ಯೋಜನೆಯಡಿ ಸಹಾಯಧನ ಪಡೆದ ಫಲಾನುಭವಿಗಳಿಗೆ ಚೆಕ್ ಹಾಗೂ ಅನುಮೋದನ ಪತ್ರ ವಿತರಿಸಲಾಯಿತು. ಆತ್ಮ ಯೋಜನೆಯಡಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡ 10 ಮಂದಿ ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗದಿದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಹೆಚ್.ವಿ. ಚಂದ್ರು, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಎಪಿಎಂಸಿ ಅಧ್ಯಕ್ಷರಾÀದ ಗುರುಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಚಿಕ್ಕಸ್ವಾಮಿ, ರೈತ ಮುಖಂಡರಾದ ಗೌಡಹಳ್ಳಿ ಸೋಮಶೇಖರ್, ಸಿ. ನಾಗರಾಜಪ್ಪ, ಹೊನ್ನೂರು ಬಸವಣ್ಣ, ಹೆಬ್ಬಸೂರು ಬಸವಣ್ಣ, ಎಸ್. ಮಾದಪ್ಪ, ಚಂಗಡಿ ಕರಿಯಪ್ಪ, ಸೋಮಣ್ಣ, ಪ್ರಕಾಶ್, ಮಾಡ್ರಳ್ಳಿ ಪಾಪಣ್ಣ, ಮಹದೇವಪ್ಪ, ಚಿಕ್ಕಣ್ಣ, ಷಣ್ಮುಖಪ್ಪ, ಕೃಷಿಕ ಸಮಾಜದ ಶಾಂತಪ್ಪ, ಸಿದ್ದಪ್ಪ, ರವಿ, ರಾಘವೇಂದ್ರ, ರಾಜೇಂದ್ರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸುಷ್ಮಾ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಬಳಿ ಸಿರಿಧಾನ್ಯ ನಡಿಗೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಚಾಲನೆ ನೀಡಿದರು.





