ಹನೂರು: ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಕದ್ದೊಯ್ದು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಮಾಲೀಕನೇ ಪತ್ತೆ ಮಾಡಿ ಆರೋಪಿಯನ್ನು ರಾಮಾಪುರ ಪೊಲೀಸ್ ಠಾಣೆಗೆ ನೀಡಿರುವ ಘಟನೆ ಜರುಗಿದೆ.
ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ರಾಜೇಶ್ ಎಂಬಾತನೇ ಮೇಕೆ ಕದ್ದೊಯ್ದಿದ್ದ ಕಳ್ಳನಾಗಿದ್ದಾನೆ.
ಘಟನೆಯ ವಿವರ: ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಮ್ಮನಗದ್ದೆ ಗ್ರಾಮದ ಗೋಪಾಲ ನಾಯಕರವರ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಕಳ್ಳನೋರ್ವ ಕದ್ದು ಪರಾರಿಯಾಗಿದ್ದಾನೆ.
ಮಾಲೀಕ ಗೋಪಾಲ್ ನಾಯ್ಕ ಕಳ್ಳತನವಾಗಿದ್ದ ಮೇಕೆಯನ್ನು ಸಂತೆಗಳಲ್ಲಿ ಹುಡುಕುತ್ತಿದ್ದಾಗ ಟಿ.ನರಸೀಪುರ ಸಂತೆಯಲ್ಲಿ ಮಾಲೀಕನನ್ನು ನೋಡಿದ ಮೇಕೆ ಓಡಿ ಬಂದಿದೆ. ತಕ್ಷಣ ಮೇಕೆ ಖರೀದಿ ಮಾಡಿದ್ದ ವ್ಯಕ್ತಿ ಮೇಕೆಯ ಹಿಂದೆ ಓಡಿ ಬಂದಿದ್ದಾರೆ. ಈ ವೇಳೆ ಮಾಲೀಕ ಗೋಪಾಲ್ ನಾಯ್ಕ ಇದನ್ನು ನಿಮಗೆ ಯಾರು ಮಾರಾಟ ಮಾಡಿದ್ದು ಎಂದು ವಿಚಾರಿಸಿದಾಗ ಮಾರಾಟ ಮಾಡಿದ್ದ ರಾಜೇಶನನ್ನು ಕರೆಯಿಸಿ ಈತನೇ ನಮಗೆ ಮಾರಾಟ ಮಾಡಿದ್ದು ಎಂದು ತಿಳಿಸಿದ್ದಾರೆ. ತಕ್ಷಣ ಗೋಪಾಲ್ ನಾಯ್ಕ ಮೇಕೆ ಹಾಗೂ ಆರೋಪಿಯನ್ನು ಕರೆತಂದು ರಾಮಾಪುರ ಪೊಲೀಸ್ ಠಾಣೆಗೆ ಒಪ್ಪಿಸಿ, ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅಮ್ಜದ್ ಖಾನ್ ರವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಮ್ಜದ್ ಖಾನ್ ರಾಮಪುರ ಪೊಲೀಸ್ ಠಾಣೆಗೆ ಬಂದು ದೂರು ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.





