ಚಾಮರಾಜನಗರ: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅಪರಾಧ ಮಾಡಿದ್ದು, ಶಿಕ್ಷೆ ಅನುಭವಿಸಲಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಪ್ಪು ಮಾಡಿದ್ದು, ಶಿಕ್ಷೆ ಅನುಭವಿಸಲಿ ಎಂದು ಆಗ್ರಹಿಸಿದರು.
ಇನ್ನು ಸಿ.ಟಿ.ರವಿ ಅವರಿಗೆ ಮಾಡೋಕೆ ಏನು ಕೆಲಸ ಇಲ್ಲ. ಅದಕ್ಕಾಗಿ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. ಅವರು ಅಪರಾಧ ಮಾಡಿದ್ದು, ಆ ಅಪರಾಧಕ್ಕೆ ಅವರು ಶಿಕ್ಷೆ ಅನುಭವಿಸಲಿ ಎಂದು ಆಗ್ರಹಿಸಿದರು.
ಓರ್ವ ಜನಪ್ರತಿನಿಧಿಯಾಗಿ ಮಹಿಳೆ ಬಗ್ಗೆ ಅಗೌರವಯುತವಾಗಿ ಮಾತನಾಡಿ ಅವಾಚ್ಯ ಶಬ್ಧಗಳನ್ನು ಉಪಯೋಗ ಮಾಡಿದ ಅವರಿಗೆ ಏನಾದ್ರು ನೈತಿಕತೆ ಇದ್ಯಾ? ಸಿ.ಟಿ.ರವಿ ಹೇಳಿಕೆಗೆ ಯಾವುದೇ ರೀತಿಯಲ್ಲೂ ಬೆಲೆಯಿಲ್ಲ ಎಂದು ವಾಗ್ದಾಳಿ ನಡೆಸಿದರು.