Mysore
30
few clouds

Social Media

ಬುಧವಾರ, 28 ಜನವರಿ 2026
Light
Dark

ವಿಷಪ್ರಾಶನದಿಂದ ಐದು ಹುಲಿಗಳ ಸಾವು ಪ್ರಕರಣ: ಮೂವರು ಆರೋಪಿಗಳು ಅರಣ್ಯ ಇಲಾಖೆ ಕಸ್ಟಡಿಗೆ

tigers killed by poisoning

ಹನೂರು: 5 ಹುಲಿಗಳಿಗೆ ವಿಷಪ್ರಾಶನ ಮಾಡಿದ್ದ ಮೂವರು ಹಂತಕರನ್ನು ಹೆಚ್ಚಿನ ವಿಚಾರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜುಲೈ.3ರ ಗುರುವಾರ ಮಧ್ಯಾಹ್ನ 2 ಗಂಟೆಯವರೆಗೆ ಕಸ್ಟಡಿಗೆ ನೀಡಿ ಜೆಎಂಎಫ್‌ಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವಲಯದ ಮಿಣ್ಯಂ ಅರಣ್ಯ ಪ್ರದೇಶದ ಮಹದೇಶ್ವರ ದೇವಸ್ಥಾನದ ಸಮೀಪ ಐದು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟಿದ್ದವು.

ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದ ತನಿಖಾ ತಂಡ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಹನೂರು ತಾಲ್ಲೂಕಿನ ಕೊಪ್ಪ ಗ್ರಾಮದ ಮಾಧುರಾಜು, ನಾಗರಾಜು, ಕುನ್ನಪ್ಪ ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಈ ವೇಳೆ ನ್ಯಾಯಾಧೀಶರು ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಸ್ಟಡಿಗೆ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರ ವಕಾಲತ್ತು ವಹಿಸಿದ್ದ ಮಹದೇವ ಪ್ರಸಾದ್‌ರವರು ಈಗಾಗಲೇ ವಿಚಾರಣೆ ಮುಗಿದಿರುವುದರಿಂದ ಕಸ್ಟಡಿಯ ಅವಶ್ಯಕತೆ ಇಲ್ಲ ಎಂದು ಮನವರಿಕೆ ಮಾಡಿದರು.

ಸರ್ಕಾರಿ ಅಭಿಯೋಜಕರು ಆರೋಪಿಗಳನ್ನು ವಶಕ್ಕೆ ಪಡೆದು ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದೇವೆ. ಯಾವುದೇ ವಿಚಾರಣೆ ನಡೆಸಿಲ್ಲ ಎಂದು ವಾದ ಮಂಡಿಸಿದರು.

ವಾದ ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶರು ವಿಚಾರಣೆ ನಡೆಸಿ ಜುಲೈ.3ರ (ಗುರುವಾರ) ಮಧ್ಯಾಹ್ನ 2 ಗಂಟೆಗೆ ಕೋರ್ಟ್‌ಗೆ ಹಾಜರುಪಡಿಸುವಂತೆ ಆದೇಶ ಹೊರಡಿಸಿದ್ದರು. ವಿಚಾರಣೆಯ ವೇಳೆ ಆರೋಪಿಗಳಿಗೆ ಯಾವುದೇ ತರಹದ ಕಿರುಕುಳ ನೀಡಬಾರದು, ಸಮಯಕ್ಕೆ ಸರಿಯಾಗಿ ಊಟ ನೀಡಬೇಕು. ವಾಪಸ್ ಕರೆದುಕೊಂಡು ಬರುವಾಗ ವೈದ್ಯಕೀಯ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ತರುವಂತೆ ಸೂಚನೆ ನೀಡಿದರು.

ಒಂದು ಗಂಟೆಗೂ ಹೆಚ್ಚು ಕಾಲ ಕಾದು ಕುಳಿತ ಅಧಿಕಾರಿಗಳು: ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಐದು ಹುಲಿಗಳ ಸಾವಿಗೆ ಕಾರಣರಾಗಿದ್ದ ಮೂವರು ಹಂತಕರನ್ನು ನ್ಯಾಯಾಲಯಕ್ಕೆ ಸೋಮವಾರ ಬೆಳಗ್ಗೆ ೧೧:೩೦ ಗಂಟೆಗೆ ಕರೆ ತರಲಾಯಿತು. ಇದಾದ 10 ನಿಮಿಷಕ್ಕೆ ಆರೋಪಿಗಳ ವಿಚಾರಣೆ ನಡೆಸಲಾಯಿತು. ಈ ವೇಳೆ ಆರೋಪಿಗಳ ಪರ ಯಾರೊಬ್ಬರು ವಕಾಲತ್ತು ವಹಿಸದ ಹಿನ್ನೆಲೆ 30 ನಿಮಿಷಗಳ ಕಾಲ ವಿಚಾರಣೆ ಮುಂದೂಡಿದರು. ತದನಂತರ ಆರೋಪಿಗಳ ಪರ ಮಹಾದೇವ ಪ್ರಸಾದ್ ಎಂಬವರು ವಕಾಲತ್ತು ವಹಿಸಿದರು.

ಆರೋಪಿಗಳ ಪರ ವಕೀಲರು ವಕಾಲತ್ತು ಹಾಕುವವರೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳನ್ನು ಅರಣ್ಯ ಇಲಾಖೆಯ ವಾಹನದಲ್ಲಿ ಬಂದೋಬಸ್ತ್‌ನಲ್ಲಿ ಕೂರಿಸಿಕೊಂಡು ಕೋರ್ಟಿನ ಆದೇಶಕ್ಕೆ ಕಾದು ಕುಳಿತ್ತಿದ್ದರು.

ಸಾರ್ವಜನಿಕರಿಂದ ಕುತೂಹಲ: ವಿಷಪ್ರಾಶನ ಮಾಂಸ ಸೇವಿಸಿ ಐದು ಹುಲಿಗಳ ಸಾವಿಗೆ ಕಾರಣರಾಗಿದ್ದ ಮೂವರು ಹಂತಕರನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ವೇಳೆ ಸಾರ್ವಜನಿಕರು ಹುಲಿ ಹಂತಕರನ್ನು ನೋಡಿ ಕೆಲವರು ಆಕ್ರೋಶ ವ್ಯಕ್ತಪಡಿಸಿ ಮೂಕ ಪ್ರಾಣಿಗಳ ಸಾವಿಗೆ ಕಾರಣರಾದವರು ಇವರೇನಾ, ಅಯ್ಯೋ ಪಾಪಿಗಳೇ ಎಂದು ಮರುಕ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

Tags:
error: Content is protected !!