ಗುಂಡ್ಲುಪೇಟೆ: ಪಟ್ಟಣದ ಊಟಿ-ಮೈಸೂರು ಮುಖ್ಯರಸ್ತೆಯ ಬದಿಯಲ್ಲಿರುವ ಮದ್ದಾನೇಶ್ವರ ಶಾಲೆ ಕಾಂಪೌಂಡ್ ಬಳಿ ಮದ್ಯದ ಅಮಲಿನಲ್ಲಿ ಯುವಕರ ನಡುವೆ ಗಲಾಟೆ ನಡೆದಿದ್ದು, ಯುವಕನೊಬ್ಬ ಕೊಲೆಯಾಗಿದ್ದಾನೆ.
ಪಟ್ಟಣದ ನಾಯಕರ ಬೀದಿಯ ಲೇಟ್ ನಾಗೇಶ್ ಎಂಬುವರ ಪುತ್ರ ಶಿವು (36) ಕೊಲೆಯಾದವನು. ಗಾರೆ ಕೆಲಸ ಮಾಡಿಕೊಂಡಿದ್ದ ಶಿವು ಪಟ್ಟಣದ ಜನತಾ ಕಾಲೋನಿಯಲ್ಲಿ ವಾಸವಿದ್ದನು.
ಸೋಮವಾರ ರಾತ್ರಿ ಮದ್ಯ ಸೇವಿಸಿ ಬರಲು ಮನೆಯಿಂದ ಮದ್ಯದಂಗಡಿಗೆ ತೆರಳಿದ್ದಾನೆ. ತಡರಾತ್ರಿ ಕೆಲವು ಯುವಕರ ಜೊತೆ ಗಲಾಟೆ ನಡೆದಿದ್ದು, ಕಲ್ಲು, ದೊಣ್ಣೆಯಿಂದ ಎದೆ, ಗಡ್ಡ, ಕಿವಿ ಭಾಗಕ್ಕೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ರಕ್ತ ಸ್ರಾವವಾಗುತಿತ್ತು. ಗಾಯಗೊಂಡಿದ್ದ ಶಿವು ಮನೆಗೆ ಬಂದು ಯಾರೋ ಇಬ್ಬರು ಯುವಕರು ಹೊಡೆದರು ಎಂದು ಹೇಳಿದ. ನಂತರ ಹೊಟ್ಟೆನೋವು, ಎದೆ ನೋವು ಎಂದು ನರಳಿ ಪ್ರಾಣಬಿಟ್ಟನು ಎಂದು ಮೃತನ ಪೋಷಕರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದರು.
ಬಂಧನ; ಶಿವು ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಮೇಲೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಮಹಮ್ಮದ್ ಜಿಯಾವುದ್ದಿನ್ ಎಂಬವರ ಪುತ್ರ ಮಹಮ್ಮದ್ ನಿಜಾಮುದ್ದಿನ್ (30) ಎಂಬಾತನನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಶವವಿಟ್ಟು ಪ್ರತಿಭಟನೆ; ಮೃತ ಸಂಬಂಧಿಕರು ಹಾಗೂ ಬಡಾವಣೆಯ ಮುಖಂಡರು ಮೃತ ಶಿವು ಶವವನ್ನು ಪಟ್ಟಣ ಪೊಲೀಸ್ ಠಾಣೆ ಎದುರಿಗೆ ಸಾಗಿಸಿ ನ್ಯಾಯ ದೊರಕಿಸಬೇಕು. ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸೋಮವಾರ ರಾತ್ರಿ ಮುಸ್ಲಿಂ ಯುವಕರ ಗುಂಪು ಶಿವು ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ಆತ ಸತ್ತಿದ್ದಾನೆ. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಿವು ಎದೆ ನೋವಿನಿಂದ ಸತ್ತಿದ್ದಾನೆ ಎಂದು ಪೋಸ್ಟ್ ಹಾಕಿದ್ದಾರೆ. ನಂತರ ಡಿಲೀಟ್ ಮಾಡಿರುವುದು ಸರಿಯಲ್ಲ ಎಂದು ಖಂಡಿಸಿದರು.
ಶಿವು ಮೇಲೆ 15 ಯುವಕರ ಗುಂಪು ಹಲ್ಲೆ ನಡೆಸಿದೆ. ಅವರನ್ನು ಕೂಡಲೇ ಬಂಧಿಸಬೇಕು. ಮೃತನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸ್ಥಳದಲ್ಲೇ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಮಾನವಿರುವವರ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳುತ್ತೇನೆ ಎಂದರು. ನೀವು ಕೊಲೆಗಾರರ ಪರ ನಿಂತಿದ್ದೀರಾ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಮೃತ ಶಿವು ಕುಟುಂಬಕ್ಕೆ 8.25 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಯಿತು. ಉದ್ಯೋಗದ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಟ್ಟರು. ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.





