ಹನೂರು :ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಬಸವರಾಜು ಎಂಬುವವರ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯನ್ನು ಕಾಡುಪ್ರಾಣಿಗಳು ನಾಶ ಮಾಡಿರುವ ಘಟನೆ ನಡೆದಿದ್ದು ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಒತ್ತಾಯಿಸಿದ್ದಾರೆ
ಕಾಂಚಳ್ಳಿ ಗ್ರಾಮದ ಬಸವರಾಜ್ ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು 2 ಎಕರೆ 29 ಸೆಂಟು (ಸರ್ವೇ ನಂ 439) ಮೆಕ್ಕೆಜೋಳವನ್ನು ಕಾಡುಪ್ರಾಣಿಗಳು ನಾಶ ಮಾಡಿವೆ. ಸುಮಾರು 3 ಲಕ್ಷ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬೆಳೆ ಕಾಡು ಪ್ರಾಣಿಗಳ ಪಾಲಾಗಿದ್ದು, ಹಗಲು ಇರುಳು ಎನ್ನದೇ ಕಾವಲು ಕಾಯ್ದು, ಗೊಬ್ಬರ ಹಾಕಿ ಬೆಳೆಸಿದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ರೈತರು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು ನಾಶ ಮಾಡಿದರೆ, ಅರಣ್ಯ ಇಲಾಖೆಯವರು ಸ್ಥಳ ಮಹಜರು ಮಾಡಲು ಹಿಂದೆ ಮುಂದೆ ನೋಡಿ ಕೆಲ ದಿನಗಳು ಕಳೆದ ನಂತರ ಬರುತ್ತಾರೆ. ಆದರೆ ಸೂಕ್ತ ಪರಿಹಾರ ದೊರಕಿಸುವಲ್ಲಿ ವಿಫಲರಾಗಿದ್ದಾರೆ. ಬೆಳೆ ಪರಿಹಾರ ಎಂದು ಕೇವಲ 5ದಿಂದ 10 ಸಾವಿರ ರೂ ಕೊಡುತ್ತಾರೆ. ಅವರು ಕೊಡುವ ಪರಿಹಾರದ ಹಣಕ್ಕೆ ವರ್ಷಗಟ್ಟಲೆ ಕಾಯಬೇಕು. ಅವರು ಕೊಡುವ ಹಣ ಬಿತ್ತನೆ ಮಾಡುವುದಕ್ಕೂ ಆಗುವುದಿಲ್ಲ, ಜಮೀನನ್ನೇ ನಂಬಿಕೊಂಡು ತಾವು ಜೀವನ ನಡೆಸುತ್ತಿದ್ದು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಕೊಡುವಂತೆ ರೈತ ಬಸವರಾಜ ಮನವಿ ಮಾಡಿದ್ದಾರೆ.