Mysore
26
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

30 ಕೋಟಿ ಬೆಲೆ ಬಾಳುವ ಸರ್ಕಾರಿ ಜಾಗ ಒತ್ತುವರಿ ತೆರವು ; ತಹಶೀಲ್ದಾರ್‌ ವೈ.ಕೆ ಗುರುಪ್ರಸಾದ್ ತಂಡದ ಯಶಸ್ವಿ ಕಾರ್ಯಾಚರಣೆ

ಹನೂರು : ಪಟ್ಟಣದಿಂದ ಕೊಳ್ಳೇಗಾಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ಹುಲ್ಲೇಪುರ ಗ್ರಾಮದ ಸರ್ವೆ ನಂಬರ್‌ಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದ 30 ಕೋಟಿಗೂ ಹೆಚ್ಚು ಬೆಲೆ ಬಾಳುವ ಸುಮಾರು 14 ಎಕರೆ ಸರ್ಕಾರಿ ನಿವೇಶನವನ್ನು ಸಂರಕ್ಷಣೆ ಮಾಡುವಲ್ಲಿ ತಹಶೀಲ್ದಾರ್ ವೈ.ಕೆ ಗುರುಪ್ರಸಾದ್ ನೇತೃತ್ವದ ತಂಡ ಯಶಸ್ವಿಯಾಗಿದೆ.

ಹನೂರು ತಾಲೂಕಿನ ಹುಲ್ಲೇಪುರ ಗ್ರಾಮದ ಸರ್ವೆ ನಂಬರ್ 355/1ಎ ರಲ್ಲಿನ 5.50 ಎಕರೆ,356/ಎ ಸರ್ವೆ ನಂಬರ್ ನಲ್ಲಿನ 5.94, ಸರ್ವೇ ನಂಬರ್ 356/ಸಿ ರಲ್ಲಿನ 2.58 ಎಕರೆ ಸೇರಿದಂತೆ 14 ಎಕರೆ ಜಮೀನನ್ನು ವಿಶ್ವೇಶ್ವರ ಪ್ರಸಾದ್ ಎಂಬುವರು ಹಲವಾರು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದರು.

ಸರ್ಕಾರಿ ಒತ್ತುವರಿ ನಿವೇಶನದಲ್ಲಿ ಮೇಕೆ ಸಾಕಾಣಿಕೆ ಶೆಡ್, ವಾಸದ ಮನೆ, ಕಟ್ಟಿಕೊಂಡು ಅಕ್ರಮ ಸ್ವಾಧೀನದಲ್ಲಿದ್ದರು. ಈ ಸಂಬಂಧ ಸರ್ಕಾರಿ ನಿವೇಶನವನ್ನು ಸಂರಕ್ಷಣೆ ಮಾಡುವಂತೆ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜು ಜಿಲ್ಲಾಧಿಕಾರಿಗಳು, ಲೋಕಾಯುಕ್ತ ಪೊಲೀಸರು ಸೇರಿದಂತೆ ತಹಸಿಲ್ದಾರ್‌ರವರಿಗೆ ದೂರು ನೀಡಿದ್ದರು.

ಈ ಸಂಬಂಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 104 ಹಾಗೂ 39ನೇ ಪ್ರಕರಣದ ಉಪಬಂಧಗಳ ಮೇರೆಗೆ ತೆರವು ಮಾಡುವಂತೆ ನೋಟಿಸ್ ನೀಡಿ 15 ದಿನಗಳ ಒಳಗೆ ತೆರವು ಮಾಡುವಂತೆ ಕಳೆದ ಏಪ್ರಿಲ್ ನಲ್ಲಿಯೇ ನೋಟಿಸ್ ನೀಡಿದ್ದರು.

ನೋಟಿಸ್ ನೀಡಿ ಎರಡು ತಿಂಗಳು ಕಳೆದಿದ್ದರು ತೆರವುಗೊಳಿಸಿರಲಿಲ್ಲ. ಈ ಸಂಬಂಧ ಹಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ನಿವೇಶನವನ್ನು ಸಂರಕ್ಷಣೆ ಮಾಡುವಂತೆ ಒತ್ತಾಯಿಸಲಾಗಿತ್ತು. ಇದರಿಂದ ಎಚ್ಚೆತ್ತ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ತೆರವುಗೊಳಿಸಲು ದಿನಾಂಕ ನಿಗದಿ ಮಾಡಿ ಪೊಲೀಸರ ಸಹಕಾರದೊಂದಿಗೆ ಒತ್ತುವರಿ ಜಮೀನನ್ನು ತೆರವುಗೊಳಿಸಿದ್ದಾರೆ.

ಮಂಗಳವಾರ ಮುಂಜಾನೆ 4 ಗಂಟೆಯಿಂದಲೇ ತಹಸಿಲ್ದಾರ್ ವೈ ಕೆ ಗುರುಪ್ರಸಾದ್, ಇನ್ಸ್ಪೆಕ್ಟರ್ ಆನಂದಮೂರ್ತಿ ನೇತೃತ್ವದ ತಂಡ ಕಾರ್ಯಪ್ರವೃತ್ತರಾಗಿ ಪೊಲೀಸ್, ಅಗ್ನಿಶಾಮಕ, ಪಟ್ಟಣ ಪಂಚಾಯಿತಿ, ಆರೋಗ್ಯ, ಕಂದಾಯ ಇಲಾಖೆಯ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಎರಡು ಜೆಸಿಬಿಗಳ ಮೂಲಕ ಒಮ್ಮೆಲೆ ಕಾರ್ಯಾಚರಣೆ ನಡೆಸಿ ಒಂದು ವಾಸದ ಮನೆ, ಒಂದು ಮೇಕೆ ಸಾಕಾಣಿಕೆ ಶೆಡ್, ಶೌಚಾಲಯವನ್ನು ತೆರವುಗೊಳಿಸುವ ಮೂಲಕ 14 ಎಕರೆ ಜಮೀನನ್ನು ಸಂರಕ್ಷಣೆಮಾಡಿದ್ದಾರೆ.

ಕಂಬಗಳು ಎಲ್ಲಿಂದ ಬಂತು?: ಹನೂರು ಪಟ್ಟಣ ವ್ಯಾಪ್ತಿಯಲ್ಲಿ ಈ ಹಿಂದೆ ಬಿಎಸ್ಎನ್ಎಲ್ ಸಂಪರ್ಕವನ್ನು ಕಂಬಗಳನ್ನು ನೆಟ್ಟು, ವೈರ್ ಗಳನ್ನು ಕಟ್ಟಿ ಸಂಪರ್ಕ ನೀಡಲಾಗಿತ್ತು. ವೈಜ್ಞಾನಿಕವಾಗಿ ಕೇಬಲ್ ಗಳ ಮುಖಾಂತರ ದೂರವಾಣಿ ಸಂಪರ್ಕ ನೀಡಿದ ನಂತರ ಕಂಬಗಳು ನಿರುಪಯುಕ್ತವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ವಿಶ್ವೇಶ್ವರ ಪ್ರಸಾದ್ ತನ್ನ ಜಮೀನಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಟೆಲಿಫೋನ್ ಕಂಬಗಳನ್ನು ಅಕ್ರಮವಾಗಿ ಶೇಖರಣೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಕೊಟ್ಟಿದೆ.

ಜಮೀನಿನಲ್ಲಿ ಲಕ್ಷಾಂತರ ಬೆಲೆ ಬಾಳುವ ಸಾಮಾಗ್ರಿಗಳು ಸಂಗ್ರಹ
ಹನೂರು ತಾಲೂಕು ವ್ಯಾಪ್ತಿಯ ಹುಲ್ಲೇಪುರ ಗ್ರಾಮದ ಸರ್ವೆ ನಂಬರ್ ಗಳಲ್ಲಿ ಸರ್ಕಾರ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಜಮೀನಿನಲ್ಲಿ ಡ್ರಿಪ್ ಪೈಪ್ ಹಾಗೂ ಇನ್ನಿತರ ಕೃಷಿ ಪರಿಕರಗಳನ್ನು ಸಂಗ್ರಹಣೆ ಮಾಡಿಕೊಂಡಿದ್ದರು. ಒಬ್ಬ ಸಾಮಾನ್ಯ ರೈತ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ನೂರೆಂಟು ದಾಖಲಾತಿಗಳನ್ನು ಕೇಳುತ್ತಾರೆ ಆದರೆ ಈ ವ್ಯಕ್ತಿಗೆ ಕೃಷಿ ಪರಿಕರಗಳು ಹೇಗೆ ಬಂತು ಎಂಬುದನ್ನು ಪ್ರಜ್ಞಾವಂತ ನಾಗರಿಕರು ಪ್ರಶ್ನೆ ಮಾಡಿದ್ದಾರೆ.

ಸೂಕ್ತ ಪೊಲೀಸ್ ಬಂದೋಬಸ್ತ್: ಹನೂರು ಪಟ್ಟಣ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ 14 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ತೆರವುಗೊಳಿಸುವಂತೆ ಹಲವಾರು ಬಾರಿ ನೋಟಿಸ್ ನೀಡಿದ್ದರು ತೆರವುಗೊಳಿಸಿರಲಿಲ್ಲ .ಈ ಸಂಬಂಧ ತಾಲೂಕು ಆಡಳಿತ ಸೂಕ್ತ ಪೊಲೀಸ್ ಬಂದೋಬಸ್ ಕಲ್ಪಿಸುವಂತೆ ಹನೂರು ಪೊಲೀಸ್ ಠಾಣೆಗೆ ಮನವಿ ನೀಡಿದ್ದರು. ಈ ಹಿನ್ನೆಲೆ ಇನ್ಸ್ಪೆಕ್ಟರ್ ಆನಂದಮೂರ್ತಿ ನೇತೃತ್ವದಲ್ಲಿ ಸಶಸ್ತ್ರ ಮೀಸಲು ಪಡೆ ಸೇರಿದಂತೆ, ಇಬ್ಬರು ಸಬ್ ಇನ್ಸ್ಪೆಕ್ಟರ್, ನಾಲ್ಕು ಎಎಸ್ಐ ಮಹಿಳಾ ಪೇದೆಗಳು, ಪೇದೆಗಳು ಸೇರಿದಂತೆ 70ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಿ ಬಂದೋಬಸ್ತ್ ಕಲ್ಪಿಸಿದ್ದರು.

ಇದಲ್ಲದೆ ಆರೋಗ್ಯ ಇಲಾಖೆ ವತಿಯಿಂದ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನವನ್ನು ಸಹ ಬಂದೋಬಸ್ತ್ ಗೆ ಬಳಕೆ ಮಾಡಿಕೊಳ್ಳಲಾಗಿತ್ತು.

ಒತ್ತುವರಿ ತೆರವು ಮಾಡಿದ ನಂತರ ಸರ್ಕಾರಿ ಆಸ್ತಿಗೆ ಗುರುತು ಮಾಡಿ ಅಕ್ರಮ ಪ್ರವೇಶ ಮಾಡದಂತೆ ಬೋರ್ಡ್ ಸಹ ಹಾಕಲಾಗಿದೆ. ಒಟ್ಟಾರೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರಿ ನಿವೇಶನವನ್ನು ಉಳಿಸುವಲ್ಲಿ ಕೊನೆಗೂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಾರ್ಯಚರಣೆಯಲ್ಲಿ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಕಂದಾಯ ನಿರೀಕ್ಷಕರುಗಳಾದ ಶಿವಕುಮಾರ್, ಶೇಷಣ್ಣ, ಇನ್ಸ್ಪೆಕ್ಟರ್ ಆನಂದಮೂರ್ತಿ, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್, ಗ್ರಾಮ ಆಡಳಿತ ಅಧಿಕಾರಿಗಳು, ಭೂಮಾಪಕರು ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:
error: Content is protected !!