ಚಾಮರಾಜನಗರ : ಚಾಮರಾಜನಗರ ಗಡಿಭಾಗದಲ್ಲಿರುವ ಅಚ್ಚ ಕನ್ನಡಿಗರೇ ನೆಲೆಸಿರುವ ತಮಿಳುನಾಡಿನ ಕೊಂಗಳ್ಳಿ ಗ್ರಾಮಕ್ಕೆ ಒಂಟಿ ಆನೆಯೊಂದು ಮಂಗಳವಾರ ಬೆಳಿಗ್ಗೆ 7 ಗಂಟೆಯಲ್ಲಿ ನುಗ್ಗಿ ಗ್ರಾಮದಲ್ಲಿ ಕೆಲಕಾಲ ಆತಂಕ ಉಂಟು ಮಾಡಿತು.
ಆನೆ ಗ್ರಾಮಕ್ಕೆ ಪ್ರವೇಶಿಸಿ ಘೀಳು ಹಾಕುತ್ತಾ ಪ್ರಮುಖ ಬೀದಿಗಳಲ್ಲಿ ಅಡ್ಡಾಡಿದ್ದರಿಂದ ಗ್ರಾಮಸ್ಥರು ವಿಚಲಿತರಾಗಿ ಕೂಗಾಡಿಕೊಂಡು ಮನೆಗಳತ್ತ ದಿಕ್ಕಾಪಾಲಾಗಿ ಓಡಿದರು. ಜನರ ಕೂಗಾಟದಿಂದ ಬೆದರಿ ಆನೆಯೂ ಕೊಂಗಳ್ಳಿ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಕಡೆಯಿಂದ ಕಾಡಿನತ್ತ ಹೋಯಿತು ಎಂದು ಕೊಂಗಳ್ಳಿ ಮಠದ ಸದಾಶಿವ ಸ್ವಾಮೀಜಿ ಮಾಹಿತಿ ನೀಡಿದರು.
ಆನೆ ಆರ್ಭಟ ಮಾಡಿಕೊಂಡೇ ಊರ ಒಳಗಡೆ ಬಂದಿತು. ಆದರೆ, ಯಾವುದೇ ಹಾನಿ ಮಾಡಲಿಲ್ಲ. ಕೊಂಗಳ್ಳಿ ಸನಿಹದ ಪಾಳ್ಯದ ರಾಚ ಎಂಬವರಿಗೆ ಸೇರಿದ ಸುಮಾರು ಒಂದು ಎಕರೆ ರಾಗಿ ಫಸಲನ್ನು ಸಂಪೂರ್ಣ ನಾಶ ಮಾಡಿದೆ ಎಂದು ಅವರು ಹೇಳಿದರು.
ಗ್ರಾಮಕ್ಕೆ ಕಾಡಾನೆ ನುಗ್ಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಸುಗಳು ಆನೆ ಕಂಡು ಬೆದರಿರುವುದು ಕಂಡುಬಂದಿದೆ.





