Mysore
28
clear sky

Social Media

ಮಂಗಳವಾರ, 20 ಜನವರಿ 2026
Light
Dark

ಲಿಂಗಾನುಪಾತವನ್ನು ಸರಿದೂಗಿಸಲು ಪ್ರಯತ್ನ ಅಗತ್ಯ : ಜಿಲ್ಲಾಧಿಕಾರಿ ಕುಮಾರ

ಮಂಡ್ಯ : ಜಿಲ್ಲೆಯಲ್ಲಿ ಪ್ರತಿ 1000 ಪುರುಷರಿಗೆ ಕೇವಲ 935 ಹೆಣ್ಣು ಮಕ್ಕಳ ಲಿಂಗಾನುಪಾತ ಇದೆ. ಅಧಿಕಾರಿಗಳು ಲಿಂಗಾನುಪಾತವನ್ನು ಸರಿದೂಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಯಿ ಕಾರ್ಡ್ ಇದ್ದವರಿಗೆ ಮಾತ್ರ ಸ್ಕ್ಯಾನಿಂಗ್ ಮಾಡಿ ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಮಾಡಬಾರದು ಇದರಿಂದ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗುತ್ತವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಮಾಡುತ್ತಿರುವವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮವನ್ನು ಅವರ ಮೇಲೆ ಕೈಗೊಳ್ಳಿ ಎಂದರು. ಅಧಿಕಾರಿಗಳು ಜಿಲ್ಲೆಯಲ್ಲಿ ಇರುವ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ನಿರ್ದಿಷ್ಟ ಅವಧಿಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಜನರಿಗೆ ಹೆಣ್ಣು ಭ್ರೂಣ ಹತ್ಯೆ ತಡೆಯಲು ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿ ಆರೋಗ್ಯ ಇಲಾಖೆ ಲಿಂಗಾನುಪಾತ ಸರಿದೂಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು. ಜಿಲ್ಲೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೆಲಿವರಿ ಪ್ರಮಾಣ ಕಡಿಮೆ ಇದೆ.

ಇದನ್ನು ಓದಿ: ಕೋವಿಡ್‌ ಲಸಿಕೆಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ: ಐಸಿಎಂಆರ್‌, ಏಮ್ಸ್ ಅಧ್ಯಯನದಿಂದ ಬಹಿರಂಗ

ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೆಲಿವರಿ ಪ್ರಮಾಣ ಕಡಿಮೆಯಾಗಲೂ ಕಾರಣವೇನು ಎಂದು ಪರಿಶೀಲನೆ ನಡೆಸಿ. ಜಿಲ್ಲೆಯಲ್ಲಿ ಶೇ 69 ರಷ್ಟು ಡೆಲಿವರಿ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ ಎಂದರು. ಹೈ ರಿಸ್ಕ್ ಡೆಲಿವರಿ ಇರುವವರಿಗೆ ಪೌಷ್ಟಿಕ ಆಹಾರ ಸರಿಯಾಗಿ ನೀಡಿ ಪೋಷಣೆ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸಿ ಎಂದು ತಿಳಿಸಿದರು. ನಿಮೋನಿಯವನ್ನು ನಿರ್ಮೂಲನೆ ಮತ್ತು ಅದರ ಕುರಿತು ಅರಿವು ಮೂಡಿಸಲು ನವೆಂಬರ್ 12 ರಿಂದ 28 ಫೆಬ್ರವರಿ 2026 ರ ವರೆಗೆ Social Awareness And Actions To Neutralize Pneumonia Successfully (SAANS) ಅಭಿಯಾನ ರೂಪಿಸಲಾಗಿದೆ.

0-5 ವರ್ಷದೊಳಗಿನ ಮಕ್ಕಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಮೋನಿಯ ನಿರ್ಮೂಲನಾ ಲಸಿಕೆ ನೀಡುವ ಅಭಿಯಾನ ಇದಾಗಿದ್ದು ಈ ಸಂಬಂಧ ಜಿಲ್ಲಾಧಿಕಾರಿ ಡಾ ಕುಮಾರ ಅವರು (SAANS) ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಸಭೆಯಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಕೆ.ಪಿ ಅಶ್ವಥ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್. ಆಶಾಲತಾ, ಡಾ. ಬೆಟ್ಟಸ್ವಾಮಿ, ನಿವೃತ್ತ ಡಿ.ಹೆಚ್.ಓ ಡಾ.ಟಿ.ಎನ್. ಮರೀಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!