ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಳಸಿಕೆರೆ ಗ್ರಾಮದ ಈರಣ್ಣ ಎಂಬುವರು ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಕುಗ್ರಾಮ ತೊಳಸಿಕೆರೆ ಗ್ರಾಮದ ಈರಣ್ಣ ಎಂಬುವವರು ಕಳೆದ ಆರು ವರ್ಷಗಳಿಂದ ತಾವೇ ನಾಟಿ ಹಸುವಿನ ಸಗಣಿ ಹಾಗೂ ಮಣ್ಣಿನಿಂದ ಗಣೇಶ ಮೂರ್ತಿ, ಗಣೇಶನ ವಾಹನ ಇಲಿ, ಪೂಜೆ ಸಾಮಗ್ರಿಗಳನ್ನು ಮಣ್ಣಿನಲ್ಲಿ ತಯಾರು ಮಾಡಿ ಅದಕ್ಕೆ ಬಣ್ಣ ಬಳಿದು ಅಲಂಕಾರ ಮಾಡಿ ವಿಶೇಷ ಪೂಜೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಣ್ಣಿನ ಗಣಪತಿಯನ್ನು ನಿರ್ಮಾಣ ಮಾಡಲು ಒಂದು ವಾರ ಸಮಯ ತೆಗೆದುಕೊಂಡು ಮಂಟಪದೊಂದಿಗೆ ಮೂರ್ತಿ ನಿರ್ಮಾಣ ಮಾಡಿ ವಿವಿಧ ಬಗೆಯ ಕಲರ್ ಬಳಕೆ ಮಾಡಿ ಬಣ್ಣದ ಲೇಪನ ಮಾಡಿದ್ದಾರೆ.
ಈ ವೇಳೆ ಈರಣ್ಣ ಮಾತನಾಡಿ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮಣ್ಣಿನ ಗಣಪತಿಯನ್ನೇ ಬಳಕೆ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ನಾನೇ ಕಳೆದ ಆರು ವರ್ಷಗಳಿಂದ ಗ್ರಾಮಸ್ಥರ ಸಹಕಾರದಿಂದ ಮಣ್ಣಿನ ಗಣಪತಿ ನಿರ್ಮಾಣ ಮಾಡಿ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.