ಹನೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಗೆ ಪಲ್ಟಿಯಾದ ಪರಿಣಾಮ ೮ ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಎಲ್ಲೇಮಾಳ ಗ್ರಾಮದ ಸಮೀಪ ಭಾನುವಾರ ಬೆಳಿಗ್ಗೆ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಸರಗೂರು ಮೋಳೆ ಗ್ರಾಮದ ಚಾಲಕ ಶ್ರೀನಿವಾಸ್, ಸಂಬಂಧಿಕರಾದ ರಾಜಮ್ಮ, ನಾಗರತ್ನ, ಜಯಮಣಿ, ಸುಮಂಗಲಿ, ರಾಣಿ, ಲೀಲಾಶ್ರೀ ಗಾಯಗೊಂಡವರು.
ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಲೆ ಮಹದೇಶ್ವರ ದರ್ಶನ ಪಡೆದು ವಾಪಸ್ ಗ್ರಾಮಕ್ಕೆ ತೆರಳುವಾಗ ಎಲ್ಲೇಮಾಳ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು ಪಲ್ಟಿಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ೧೧೨ ಪೊಲೀಸರು ಗಾಯಾಳುಗಳನ್ನು ೧೦೮ ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗೆ ಆಸ್ಪತ್ರೆ ಕಳುಹಿಸಿಕೊಟ್ಟಿದ್ದಾರೆ. ಎಂಟು ಜನರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.





