ಹನೂರು : ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಬಾರದು ಎಂದು ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು, ಮರೂರು ಗ್ರಾಮಸ್ಥರು ಸೇರಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪೊನ್ನಾಚಿ ಗ್ರಾಮದ ಶಿವಣ್ಣ ಮಾತನಾಡಿ, ಮಲೆ ಮಹದೇಶ್ವರ ವನ್ಯಜೀವಿಧಾಮವು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆಯಾದರೆ ನಮ್ಮ ಜನರ ಜೀವನ ದುಸ್ತರವಾಗಲಿದೆ. ನಮ್ಮ ಸಾಂಪ್ರದಾಯಿಕ ಆಚರಣೆಗಳೆಲ್ಲವೂ ಮರೆಯಾಗಲಿವೆ. ಜೊತೆಗೆ ಸಮುದಾಯದ ಕಟ್ಟುಪಾಡಿನಿಂದ ಹೊರ ಬರಬೇಕಾಗುತ್ತದೆ. ಅರಣ್ಯದಂಚಿನ ಕುಗ್ರಾಮದಲ್ಲಿ ವಾಸ ಮಾಡುತ್ತಿರುವ ನಾವುಗಳು, ಜಾನುವಾರುಗಳನ್ನು ನಂಬಿ ಬದುಕುತ್ತಿದ್ದೇವೆ. ಈ ಯೋಜನೆ ಅನುಷ್ಠಾನಗೊಂಡಲ್ಲಿ ಅರಣ್ಯದೊಳಗೆ ಜಾನುವಾರುಗಳನ್ನು ನಿರ್ಬಂಧಿಸಲಾಗುವುದು. ಕಾಡಂಚಿನ ಪ್ರದೇಶಗಳಲ್ಲಿ ದೇವಾಲಯಗಳು ಇದ್ದು, ಅಲ್ಲಿಗೆ ನಿರ್ಬಂಧ ಹೇರುತ್ತಾರೆ. ಅಂತಹ ಸಂದರ್ಭಗಳಲ್ಲಿ ನಾವು ಏನು ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಮ್ಮ ಭಾವನೆಗೆ ಧಕ್ಕೆ ಆಗುತ್ತದೆ. ಹಾಗಾಗಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ:-ನಾಳೆಯಿಂದ 5 ದಿನಗಳ ಕಾಲ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ
ಸ್ಥಳೀಯ ಮಟ್ಟದ ವರದಿ ನೀಡಿ
ಸರ್ಕಾರದ ಮಟ್ಟಕ್ಕೆ ಅಧಿಕಾರಿಗಳು ಸ್ಥಳೀಯವಾಗಿ ವರದಿ ಪಡೆದು, ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ಜನರ ಅಭಿಪ್ರಾಯ ಪಡೆದು ಅನಂತರ ಸರ್ಕಾರದ ಮಟ್ಟಕ್ಕೆ ವರದಿ ನೀಡಬೇಕು. ಅದ್ಯಾವ ಕೆಲಸವೂ ಆಗದೆ ಅಧಿಕಾರಿಗಳು ನೇರವಾಗಿ ವರದಿಯನ್ನು ನೀಡಿರುವುದು ಖಂಡನೀಯ. ಹಾಗಾಗಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಬೇಕು ಎಂದರು.
ಪ್ರತಿಭಟನೆ ವೇಳೆ ಯಾವುದೇ ಅವಘಡಗಳು ಸಂಭವಿಸದಂತೆ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯ ವತಿಯಿಂದ ಮುಂಜಾಗ್ರತವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಅರಣ್ಯ ಇಲಾಖೆಯ ಅಧಿಕಾರಿಗಳು, ಪೊನ್ನಾಚಿ ಮಣಿಗಾರ ಪಿ. ಕೆ .ಬಸವರಾಜ್, ಗೌಡ್ರು ಶಿವಣ್ಣ, ಪೊನ್ನಾಚಿ ಸ್ನೇಹ ಜೀವಿ ರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಕೇಶವಮೂರ್ತಿ, ಶಿವಬಸಪ್ಪ, ಪಿ.ಕೆ.ಬಾಲಸುಬ್ರಹ್ಮಣ್ಯ, ರಂಗಮಾದಪ್ಪ ಭಾಗವಹಿಸಿದ್ದರು.





