Mysore
26
broken clouds
Light
Dark

ಹನೂರಿನಲ್ಲಿ ಸ್ಮಶಾನ ಜಾಗ ಒತ್ತುವರಿ ತೆರವಿಗೆ ಆಗ್ರಹ

ಹನೂರು: ಹನೂರು ಪಟ್ಟಣದ ಆರ್‌.ಎಸ್.ದೊಡ್ಡಿ ಗ್ರಾಮಸ್ಥರಿಗೆ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಿರುವ 40 ಸೆಂಟ್‌ ಜಮೀನನ್ನು ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್‌ ಹಾಗೂ ಉಪ್ಪಾರ ಸಮುದಾಯದ ಮುಖಂಡರುಗಳು ತಹಶಿಲ್ದಾರ್‌ ವೈ.ಕೆ.ಗುರುಪ್ರಸಾದ್‌ರವರನ್ನು ಒತ್ತಾಯಿಸಿದರು.

ಹನೂರು ಹೋಬಳಿ ವ್ಯಾಪ್ತಿಯ ಹುಲ್ಲೇಪುರ ಗ್ರಾಮದ ಸರ್ವೆ ನಂಬರ್‌ 739ರಲ್ಲಿ ಆರ್‌.ಎಸ್.ದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಾರ್ವಜನಿಕ ಸ್ಮಶಾನಕ್ಕೆ 40 ಸೆಂಟ್‌ ನಿವೇಶನವನ್ನು 2023 ಸೆಪ್ಟೆಂಬರ್‌ನಲ್ಲಿ ಮಂಜೂರು ಮಾಡಲಾಗಿದೆ.

ಆದರೆ ಆರ್.ಎಸ್.ದೊಡ್ಡಿ ಗ್ರಾಮದ ನಿವಾಸಿಯೊಬ್ಬರು ಸ್ಮಶಾನ ಹಾಗೂ ಸರ್ಕಾರಿ ಜಾಗ ಸೇರಿದಂತೆ ಸುಮಾರು 2 ಎಕರೆಗೂ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಆರ್.ಎಸ್.ದೊಡ್ಡಿ ಗ್ರಾಮದ ನಿವಾಸಿಗಳು ಮೃತಪಟ್ಟಾಗ ಅಂತ್ಯಕ್ರಿಯೆ ಮಾಡಲು ಸ್ಥಳವಿಲ್ಲದೇ ಪರದಾಡುವಂತಾಗಿದೆ.

ಜಮೀನು ಇರುವವರು ಮೃತಪಟ್ಟಾಗ ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಆದರೆ ಜಮೀನು ಇಲ್ಲದವರು ತೀವ್ರ ಕಷ್ಟ ಪಡುವಂತಾಗಿದೆ. ಆದ್ದರಿಂದ ತಾಲ್ಲೂಕು ಆಡಳಿತ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಆರ್.ಎಸ್.ದೊಡ್ಡಿ ಗ್ರಾಮದ ಉಪ್ಪಾರ ಸಮುದಾಯದ ವೆಂಕಟರಂಗಶೆಟ್ಟಿ ಎಂಬುವವರು ಮೃತಪಟ್ಟಿದ್ದರು. ಇವರಿಗೆ ಸ್ವಂತ ಜಮೀನು ಇಲ್ಲದೆ ಇರುವುದರಿಂದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಆದರೆ ಸ್ಮಶಾನ ಜಾಗ ಒತ್ತುವರಿಯಾಗಿರುವುದು ತಿಳಿಯುತ್ತಿದ್ದಂತೆ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್‌ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್‌, ತಹಶಿಲ್ದಾರ್‌ ವೈ.ಕೆ.ಗುರುಪ್ರಸಾದ್‌, ಕಂದಾಯ ನಿರೀಕ್ಷಕ ಶೇಷಣ್ಣ, ಇನ್ಸ್‌ಪೆಕ್ಟರ್‌ ಶಶಿಕುಮಾರ್‌ ಅವರಿಗೆ ಮಾಹಿತಿ ನೀಡಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದು ಒತ್ತುವರಿ ತೆರವುಗೊಳಿಸಿ ಅಂತ್ಯಕ್ರಿಯೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.

ಈ ವೇಳೆ ಮಾತನಾಡಿದ ತಹಶಿಲ್ದಾರ್‌ ಗುರುಪ್ರಸಾದ್‌ ಅವರು, ಸರ್ಕಾರ ಈಗಾಗಲೇ ಈ ಗ್ರಾಮದ ನಿವಾಸಿಗಳಿಗೆ ಸ್ಮಶಾನಕ್ಕೆ ಜಾಗ ನೀಡಿದೆ. ಆದರೆ ಖಾಸಗಿ ವ್ಯಕ್ತಿ ಜಮೀನು ಒತ್ತುವರಿ ಮಾಡಿಕೊಂಡಿರುವುದರಿಂದ ಸೋಮವಾರ ಅಳತೆ ಮಾಡಿ ಗಡಿ ಗುರುತಿಸಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರ ಮಾಡುವುದಾಗಿ ತಿಳಿಸಿದರು.