ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಪ್ರದೇಶದಲ್ಲಿ ತಾಯಿ ಹುಲಿ ಸೇರಿದಂತೆ ಐದು ಹುಲಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾದ ಅಲಿಯಾಸ್ ಮಾದರಾಜು, ನಾಗರಾಜ್ ಹಾಗೂ ಕೋನಪ್ಪ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಬಂಧಿಸಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ವಿಚಾರಣೆ ನಡೆಸುತ್ತಿದ್ದಾರೆ.
ತನ್ನ ಹಸುವನ್ನು ಹುಲಿ ಕೊಂದಿದ್ದಕ್ಕೆ ನಾನೇ ವಿಷ ಹಾಕಿ ಹುಲಿಯನ್ನು ಕೊಂದಿರುವುದಾಗಿ ಮಾದನ ತಂದೆ ಶಿವಣ್ಣ ಹೇಳಿಕೆ ನೀಡಿದ್ದರು. ಪುತ್ರನನ್ನು ರಕ್ಷಿಸುವ ಸಲುವಾಗಿ ತಾನು ಹುಲಿ ಸಾಯಿಸಿದ್ದಾಗಿ ಹೇಳಿಕೆ ನೀಡಿದ್ದರು. ಆದರೆ ತೀವ್ರ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಶಿವಣ್ಣನ ಪುತ್ರ ಮಾದ ಅಲಿಯಾಸ್ ಮಾದರಾಜು ಐದು ಹುಲಿಗಳ ಸಾವಿಗೆ ನಾನೇ ಕಾರಣ. ನಾನು ತುಂಬಾ ಪ್ರೀತಿಯಿಂದ ಹಸುವನ್ನು ಸಾಕಿದ್ದೆ. ಆದರೆ ಹುಲಿ ಅದನ್ನು ತಿಂದು ಹಾಕಿತ್ತು. ಸತ್ತ ಹಸುವಿಗೆ ವಿಷ ಹಾಕಿದ್ದೆ. ಅದನ್ನು ತಿಂದು ಹುಲಿಗಳು ಸಾವನ್ನಪ್ಪಿವೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.





