ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಾಣೆ, ತೋಕೆರೆ ಕೊಕ್ಕಬರೆ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಗ್ರಾಮಸ್ಥರು ಮಾತನಾಡಿ, ನಾವು ಕಾಡಂಚಿನ ಅರಣ್ಯ ಮಧ್ಯಭಾಗದಲ್ಲಿ ಇರುವುದರಿಂದ ರಾತ್ರಿ ವೇಳೆ ವಿದ್ಯುತ್ ಇಲ್ಲದೆ ಇರುವುದರಿಂದ ಪ್ರತಿನಿತ್ಯ ಕಾಡುಪ್ರಾಣಿಗಳ ಭಯದಲ್ಲಿ ಜೀವನ ನಡೆಸುವಂತಾಗಿದೆ. ಸಮರ್ಪಕ ರಸ್ತೆ ಇಲ್ಲದೆ ಇರುವುದರಿಂದ ಸಂಚರಿಸಲು ತೊಂದರೆಯಾಗುತ್ತಿದೆ. ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣವಾಗದೇ ಇರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಲು ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಈ ಹಿಂದೆ ಒದಗಿಸಲಾಗಿದ್ದ ಜನವನ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ನಮಗೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಪರಿಹಾರ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ಈಗಾಗಲೇ ಕಾಡಂಚಿನ ನಾಲ್ಕು ಗ್ರಾಮಗಳಿಗೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇನ್ನು 15 ದಿನಗಳಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರಿಗೆ ವ್ಯವಸ್ಥೆ ಸಂಬಂಧ ಚರ್ಚೆ ನಡೆಸಲಾಗುವುದು ಎಂದರು.
ದೊಡ್ಡಾಣಿ ಗ್ರಾಮಸ್ಥರು ಮಾತನಾಡಿ, ನಾವು ಮಾಟಳ್ಳಿ ಗ್ರಾಮದ ಮೂಲಕವೇ ಹೆಚ್ಚು ಓಡಾಟ ನಡೆಸುವುದರಿಂದ ನಮಗೆ ಈ ಮಾರ್ಗಕ್ಕೆ ರಸ್ತೆ ಸಂಪರ್ಕ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ವಾರದಲ್ಲಿ ಒಂದು ದಿನ ಮೊಬೈಲ್ ಆಂಬುಲೆನ್ಸ್ ಆರೋಗ್ಯ ಸೇವೆ ಒದಗಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಡಿಎಚ್ಒ ಅವರ ಜೊತೆ ಚರ್ಚೆ ನಡೆಸಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತೋಕೆರೆ ಗ್ರಾಮದಲ್ಲಿ ಗರ್ಭಿಣಿಯೊಬ್ಬರಿಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಹನ ವ್ಯವಸ್ಥೆ ಇಲ್ಲದೆ ದಾರಿ ಮಧ್ಯದಲ್ಲಿ ಹೆರಿಗೆಯಾಗಿದ್ದ ಮಗುವನ್ನು ಜಿಲ್ಲಾಧಿಕಾರಿಗಳಿಗೆ ತೋರಿಸಿ ಸಮಸ್ಯೆಯನ್ನು ಹೇಳಿಕೊಂಡಿದ್ದು ಮನಕಲವಂತಿತ್ತು.
ಪರಿಶೀಲನೆ ವೇಳೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು, ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್, ಡಿಡಿಎಲ್ಆರ್ ವಿದ್ಯಾರಾಣಿ, ಎಡಿಎಲ್ ಆರ್ ನಟರಾಜು, ಎಇಇ ಚಿನ್ನಣ್ಣ, ಪಿಡಿಒ ಕಿರಣ್ ಗ್ರಾಮ ಆಡಳಿತ ಅಧಿಕಾರಿ ವಿನೋದ್, ವೈದ್ಯಾಧಿಕಾರಿ ಪುಷ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.





