ಹನೂರು: ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಮ್ಮನಗದ್ದೆ ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆಶ್ರಯ ನಿವೇಶ ಮತ್ತು ವಸತಿ ಒದಗಿಸಿಕೊಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಜೊತೆ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಹನೂರು ಪಟ್ಟಣದ ತಹಶಿಲ್ದಾರ್ ಕಚೇರಿ ಮುಂಭಾಗ ಜಮಾಯಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮಂಡ್ಯ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ ಅವರು, ದೊಮ್ಮನ ಗದ್ದೆ ಗ್ರಾಮದಲ್ಲಿ ಸುಮಾರು 85 ಕ್ಕೂ ಹೆಚ್ಚು ಪರಿಶಿಷ್ಟ ಜಾತಿಗೆ ಸೇರಿದ ಆದಿ ಜಾಂಬವ ಸಮುದಾಯದ ಕುಟುಂಬಗಳು ನೂರಾರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಈ ಕುಟುಂಬಗಳಿಗೆ ಸರ್ಕಾರ ಬಿಪಿಎಸ್ ಕಾರ್ಡ್ ಸಹ ವಿತರಿಸಿದೆ. ಈ ನಿಟ್ಟಿನಲ್ಲಿ ವಾಸ ಮಾಡಲು ಸರ್ಕಾರ ನಿವೇಶನ ಮತ್ತು ವಸತಿ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಬಳಿಕ ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ, ನೀವು ಶೆಡ್ ಹಾಕಿಕೊಂಡು ಇರುವ ಸರ್ವೆ ನಂಬರ್ ಸಿವಿಲ್ ನ್ಯಾಯಾಲಯದಲ್ಲಿ ಇದೆ. ಆದ್ದರಿಂದ ನಾನು ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ. ಈ ಪ್ರದೇಶ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗ ಗುರುತಿಸಿ ಸರ್ವೆ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.