ಹನೂರು : ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆಪಾಳ್ಯ ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ತಾಲ್ಲೂಕಿನ ಗಡಿಯಂಚಿನ ಹುಣಸೆಪಾಳ್ಯ ಗ್ರಾಮದ ಜಯಪ್ಪ ಎಂಬವರಿಗೆ ಸೇರಿದ ಜಮೀನಿನ ಮಾರ್ಗವಾಗಿ ಚಿರತೆ ಪ್ರವೇಶಿಸಿ ಕಾನಮೋಳೆ ದೊಡ್ಡಿ ಗ್ರಾಮದ ಜಡೇರುದ್ರ ಅವರಿಗೆ ಸೇರಿದ ಹಸುವನ್ನು ಕೊಂದುಹಾಕಿದೆ. ಜಮೀನಿನಲ್ಲಿ ಮಲಗಿದ್ದ ಇತರೆ ಜಾನುವಾರುಗಳು ಚಿರತೆಯನ್ನು ನೋಡಿ ಭಯದಿಂದ ಕಾಲ್ಕಿತ್ತಿವೆ.
ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಮಾತನಾಡಿ, ಕಳೆದ ಹಲವಾರು ತಿಂಗಳುನಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ, ಸಾಕು ಪ್ರಾಣಿಗಳ ಸಂರಕ್ಷಣೆಯೇ ದೊಡ್ಡ ಜವಾಬ್ದಾರಿಯಾಗಿದೆ. ಒಂದೆಡೆ ಕಾಡಾನೆಗಳ ದಾಳಿಯಿಂದ ಬೆಳೆ ನಾಶವಾಗುತ್ತಿದ್ದರೆ ಒಂದೆಡೆ ಕಾಡು ಪ್ರಾಣಿಗಳ ಹಾವಳಿಯಿಂದ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಕಾಡುಪ್ರಾಣಿಗಳ ಸಂರಕ್ಷಣೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.
ಚಿರತೆ ದಾಳಿಯಿಂದ ಮೃತಪಟ್ಟಿರುವ ಹಸುವಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕೆಂದು ನೊಂದ ರೈತ ಒತ್ತಾಯಿಸಿದ್ದಾರೆ.





