ಗುಂಡ್ಲುಪೇಟೆ : ತಾಲ್ಲೂಕಿನ ಮಂಚಹಳ್ಳಿ ಗ್ರಾಮದ ಹುಲಿ ಕೆರೆ ಸಮೀಪ ಎಂ.ಆರ್.ಶಿವಣ್ಣರವರ ಜಮೀನಿನಲ್ಲಿ ಬೆಳಿಗ್ಗೆ 11.30ರ ವೇಳೆಯಲ್ಲಿ ಎರಡು ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಒಂದು ಹಸುವನ್ನು ಕೊಂದುಹಾಕಿದ್ದು, ಮತ್ತೊಂದು ಹಸು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಜಮೀನಿನಲ್ಲಿ ಹಸು ಮೇಯಿಸುವ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿದ್ದು ಮಂಚಹಳ್ಳಿ-ಸಾವಕನಹಳ್ಳಿ ಪಾಳ್ಯ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕಾಡಾನೆಗಳ ದಾಳಿಯಿಂದ ನಲುಗಿದ್ದ ಗ್ರಾಮಸ್ಥರಿಗೆ ಈಗ ಹುಲಿ ದಾಳಿಯ ಭಯ ಆರಂಭವಾಗಿದ್ದು, ಜನರು ಹೊರಗೆ ಓಡಾಡಲು ಭಯಪಡುವಂತಾಗಿದೆ.
ಇದನ್ನೂ ಓದಿ:-ಹುಲಿ ದಾಳಿಗೆ ಹಸು ಸಾವು, ಮತ್ತೊಂದು ಗಂಭೀರ
3 ದಿನಗಳ ಹಿಂದೆ ಓಂಕಾರ ಅರಣ್ಯ ವಲಯದ ಕಚೇರಿಗೆ ತೆರಳಿ ಹುಲಿಯ ಚಲನವಲನದ ಬಗ್ಗೆ ಮಾಹಿತಿ ನೀಡಿ ಬಂದಿದ್ದೆವು. ಅವರು ತಕ್ಷಣ ಕೂಂಬಿಂಗ್ ಮಾಡಿ ಹುಲಿಯನ್ನು ನಿಯಂತ್ರಿಸಿದ್ದರೆ ಇಂದು ಮಂಚಳ್ಳಿಯಲ್ಲಿ ಎರಡು ಹಸುಗಳ ಪ್ರಾಣ ಉಳಿಯುತ್ತಿತ್ತು. ಈಗ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ಅರಣ್ಯ ಇಲಾಖೆಯಿಂದ ಕೂಂಬಿಂಗ್ ನಡೆಸುತ್ತಿದ್ದು ಹುಲಿಯೋ, ಚಿರತೆಯೋ ಎಂಬ ಕುರಿತು ಅನುಮಾನವಿದೆ. ಒಂದು ಹಸು ಮೃತಪಟ್ಟಿದ್ದು, ಮತ್ತೊಂದು ಜೀವಂತವಾಗಿದೆ. ಜನರು ಕೂಂಬಿಂಗ್‌ಗೆ ಸಹಕರಿಸಬೇಕು ಎಂದು ಓಂಕಾರ್ ವಲಯಾಧಿಕಾರಿ ಹನುಮಂತಪ್ಪ ತಿಳಿಸಿದರು.





