Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಚಾ.ನಗರ | ಆನ್‌ಲೈನ್‌ ಗೇಮ್‌ ನಿಷೇಧಕ್ಕೆ ರೈತ ಸಂಘ ಆಗ್ರಹ

ಚಾಮರಾಜನಗರ : ಹಲವು ಕುಟುಂಬಗಳನ್ನೇ ಹಾಳು ಮಾಡಿ ಯುವ  ಸಮೂಹವನ್ನು ಬೀದಿಗೆ ಬೀಳುವಂತೆ ಮಾಡುತ್ತಿರುವ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಬೇಕು ಎಂದು ರೈತ ಸಂಘದ ಹೆಗ್ಗವಾಡಿಪುರ ಮಹೆಶ್ ಕುಮಾರ್ ಆಗ್ರಹಿಸಿದರು.

ಆನ್‌ಲೈನ್ ಗೇಮ್‌ನ ಚಟಕ್ಕೆ ಬಲಿಯಾದ ಅನೇಕ ಯುವಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಹಲವು ಕುಟುಂಬಗಳು ಬೀದಿ ಪಾಲಾಗುತ್ತಿವೆ. ಈ ಪ್ರಕರಣಗಳು ವರದಿಯಾಗುತ್ತಿಲ್ಲ. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇವುಗಳ ನಿಷೇಧಕ್ಕೆ ಕ್ರಮ ವಹಿಸದೇ ಮೌನವಾಗಿರುವುದು ವಿಪರ್ಯಾಸ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಆನ್‌ಲೈನ್ ಗೇಮ್ ನಿಷೇಧಿಸಬೇಕೆಂದು ಸಮಾಜದ ಪ್ರಜ್ಞಾವಂತರು ಒತ್ತಾಯ ಮಾಡುತ್ತಿದ್ದಾರೆ. ಆದರೂ ಸಂಸದರು, ಶಾಸಕರು ಧ್ವನಿ ಎತ್ತದಿರುವುದು ಖಂಡನೀಯ. ಏ.೨೫ರೊಳಗೆ ಆನ್‌ಲೈನ್ ಗೇಮ್‌ಗಳ ನಿಷೇಧಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗಳ ಮುಂಭಾಗ ಜೂಜಾಟ ಆಡಿಸಲಾಗುವುದು ಎಂದು ಎಚ್ಚರಿಸಿದರು.

ಖಾಸಗಿ ಕಿರು ಹಣಕಾಸು ಸಂಸ್ಥೆಗಳು ಬಲವಂತವಾಗಿ ಸಾಲ ವಸೂಲಿಗಿಳಿದು ಕಿರುಕುಳ ನೀಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ವಿಧೇಯಕ ಅಂಗೀಕರಿಸಿದ್ದು ಸ್ವಾಗತಾರ್ಹ, ಸಾಲ ತೀರಿಸಲು ಸಾಧ್ಯವಾಗದೆ ಮನೆ ಬಿಟ್ಟು ಹೊರ ಹೋಗಿರುವ ಕುಟುಂಬಗಳನ್ನು ವಾಪಸ್ ಅವರ ಗ್ರಾಮಗಳಿಗೆ ಸೇರಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಚಾ.ನಗರ ತಾಲ್ಲೂಕು ಅಧ್ಯಕ್ಷ ಮಹೇಶ್ ಹಾಜರಿದ್ದರು.

Tags: