ಚಾಮರಾಜನಗರ : ತಾಲ್ಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿ ನೀರುಗಂಟಿ ಚಿಕ್ಕೂಸನಾಯಕ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನೇರ ಹೊಣೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಆಪಾದಿಸಿದರು.
ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಮೃತ ಚಿಕ್ಕೂಸನಾಯಕ ಅವರ ಅಂತಿಮದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಾಯತ್ ರಾಜ್ ಇಲಾಖೆ ಲೋಪದೋಷವನ್ನು ಸರಿಪಡಿಸುವುದಲ್ಲಿ ಪ್ರಿಯಾಂಕ್ ಆಸಕ್ತಿ ತೋರುತ್ತಿಲ್ಲ. ಪರಿಣಾಮವಾಗಿ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ ಎಂದರು.
ಇದನ್ನು ಓದಿ: ಸಂಬಳ ನೀಡದಕ್ಕೆ ಮನನೊಂದು ವಾಟರ್ ಮ್ಯಾನ್ ಆತ್ಮಹತ್ಯೆ ; ಹೊಂಗನೂರು ಗ್ರಾಪಂ ಕಚೇರಿಯಲ್ಲಿ ಘಟನೆ
ಗ್ರಾ.ಪಂ. ನೌಕರರಿಗೆ ಸಂಬಳ ಇತರೇ ಸೌಲಭ್ಯಗಳನ್ನು ಕಲ್ಪಿಸುವ ಬದಲು ಪ್ರಿಯಾಂಕ್ ಖರ್ಗೆ ಪ್ರತಿ ದಿನ ಆರ್‌ಎಸ್‌ಎಸ್ ಜಪ ಮಾಡುತ್ತಿದ್ದು, ಇಲಾಖೆ ಕೆಲಸದ ನಿರ್ಲಕ್ಷ್ಯದ ಪರಿಣಾಮವಾಗಿ ಹೊಂಗನೂರು ಗ್ರಾ.ಪಂ. ನೌಕರ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಆತ್ಮಹತ್ಯೆಯಂತಹ ಇಂತಹ ಅನೇಕ ಪ್ರಕರಣಗಳು ರಾಜ್ಯಾದ್ಯಂತ ಅಲ್ಲಲ್ಲಿ ನಡೆಯುತ್ತಲೇ ಇವೆ. ಇದಕ್ಕೆ ಸಚಿವರ ಅಸಮರ್ಥ ಆಡಳಿತ ಮೂಲ ಕಾರಣವಾಗಿದೆ. ಮೃತ ಚಿಕ್ಕೂಸನಾಯಕ ಅವರ ಕುಟುಂಬಕ್ಕೆ ಕನಿಷ್ಠ ೫೦ ಲಕ್ಷ ರೂ. ಪರಿಹಾರ, ಸರ್ಕಾರಿ ನೌಕರಿ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಜಯಸುಂದರ್, ಇತರರು ಹಾಜರಿದ್ದರು.





