Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಚಾ.ನಗರ ದಸರಾ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ ; ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ

ಚಾಮರಾಜನಗರ : ಜಿಲ್ಲಾ ಯುವ ಕಲಾವಿದರ ಬಳಗದ ವತಿಯಿಂದ ನಗರದಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿರುವ ಚಾಮರಾಜನಗರ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಕಲಾತಂಡಗಳ ಮೆರವಣಿಗೆಗೆ ಸೋಮವಾರ ಚಾಲನೆ ನೀಡಲಾಯಿತು.

ನಗರದಲ್ಲಿ ಪ್ರತಿ ವರ್ಷ ರಾಜ್ಯ ಸರ್ಕಾರ ನಡೆಸುತ್ತಿದ್ದ ಚಾಮರಾಜನಗರ ಸಾಂಸ್ಕೃತಿಕ ದಸರಾವನ್ನು ಈ ಬಾರಿ ವಿವಿಧ ಕಾರಣಗಳಿಂದ ರದ್ದುಗೊಂಡಿದೆ. ಈ ಹಿನ್ನೆಲೆಯಲ್ಲಿ ದಸರಾ ಪರಂಪರೆ ಇಲ್ಲಿಗೆ ನಿಲ್ಲಬಾರದು ಎಂಬ ದೃಷ್ಟಿಯಿಂದ ಬಳಗವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಲಾತಂಡಗಳ ಮೆರವಣಿಗೆಗೆ ಹಸಿರು ನಿಶಾನೆ ತೋರಿದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಗರದಲ್ಲಿ ಈ ಬಾರಿ ರಾಜ್ಯ ಸರ್ಕಾರ ದಸರಾ ಹಮ್ಮಿಕೊಳ್ಳದೆ ಇರುವುದರಿಂದ ಕಲಾವಿದರೆ ಸ್ವಯಂಪ್ರೇರಿತರಾಗಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಮುಂದಿನ ವರ್ಷ ಜಿಲ್ಲೆಯಲ್ಲಿ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಲು ಸ್ಥಳೀಯ ಶಾಸಕರು, ಜಾನಪದ ಕಲಾವಿದರ ಜತೆ ಚರ್ಚಿಸಿ, ಅದ್ಧೂರಿ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ:-ಮಂಡ್ಯ | ಕೆರೆಗಳಿಗೆ ಒಳಹರಿವಿನ ತೊಂದರೆಯಿದ್ದಲ್ಲಿ ಪರಿಹರಿಸಿ : ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ

ಇದೇ ವೇಳೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ಮೆರವಣಿಗೆಗೆ ಚಾಲನೆ ನೀಡಿ, ಕಲಾವಿದರಿಗೆ ಶುಭ ಹಾರೈಸಿದರು.

ಮೆರವಣಿಗೆಯಲ್ಲಿ ಸತ್ತಿಗೆ ಸೂರಿಪಾಣಿ, ಡೊಳ್ಳು ಕುಣಿತ, ವೀರಗಾಸೆ, ನಾದಸ್ವರ, ಬೀಸು ಕಂಸಾಳೆ, ಸೋಬಾನೆ ಕಲಾವಿದರ ತಂಡಗಳು, ಮಂಟೇಸ್ವಾಮಿ ಕಂಡಾಯ, ನೀಲಗಾರ ಕಲಾವಿದರು ಭಾಗವಹಿಸಿದ್ದರು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟ ಮೆರವಣಿಗೆ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮುಖಾಂತರ ಜಿಲ್ಲಾಡಳಿತ ಭವನವನ್ನು ತಲುಪಿ, ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

Tags:
error: Content is protected !!