ಗುಂಡ್ಲುಪೇಟೆ : ಪಟ್ಟಣದ ಕುವೆಂಪುನಗರ (ಜನತಾ ನಗರ)ದ ಉಮೇಶ್ ಎಂಬವರ ಮನೆ ಬಾಗಿಲು ಮುರಿದು ಒಳಗೆ ನುಗ್ಗಿ ಸುಮಾರು ೩೦೦ ಗ್ರಾಂ ಚಿನ್ನ, ೨ ಕೆಜಿ ಬೆಳ್ಳಿ ನಾಣ್ಯಗಳು, ೨೯ ಲಕ್ಷ ರೂ. ನಗದು, ೨ ಬೆಲೆಬಾಳುವ ರೇಷ್ಮೆ ಸೀರೆಗಳು, ವಿವಿಧ ವಸ್ತುಗಳನ್ನು ದೋಚಿರುವ ಘಟನೆ ನಡೆದಿದೆ.
ಉಮೇಶ್‌ರವರು ಅಮೋಘ ಎಂಟರ್‌ಪ್ರೈಸಸ್ ಮಾಲೀಕರಾಗಿದ್ದು, ಗುಂಡ್ಲುಪೇಟೆ ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರ ಎದುರು ಬಣ್ಣ, ಕಬ್ಬಿಣ, ಸಿಮೆಂಟ್ ವ್ಯಾಪಾರ ಮಾಡುವ ಅಂಗಡಿ ತೆರೆದಿದ್ದಾರೆ. ಇವರು ಸೆ.೨೮ರಂದು ಮಧ್ಯಾಹ್ನ ಅಂಗಡಿ ಬಾಗಿಲು ಹಾಕಿ ಮನೆಗೆ ತೆರಳಿ ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳನ್ನು ಕರೆದುಕೊಂಡು ಮೈಸೂರಿಗೆ ದಸರಾ ದೀಪಾಲಂಕಾರ ನೋಡಲು ಹೋಗಿದ್ದಾರೆ. ಮಧ್ಯರಾತ್ರಿ ಮೈಸೂರಿಂದ ವಾಪಸ್ ಬರುವಷ್ಟರಲ್ಲಿ ಕಳ್ಳರು ಈ ಕೃತ್ಯ ಎಸಗಿದ್ದಾರೆ.
ಬೀರು ಮುರಿದು ತಾಳಿ ಸರ, ನೆಕ್ಲೇಸ್, ಬಳೆಗಳು, ಸಣ್ಣ ಚೈನ್‌ಗಳು, ಓಲೆಗಳು, ಮುತ್ತಿನ ಸರ ಸೇರಿದಂತೆ ಅಂದಾಜು ೩೦ ಲಕ್ಷ ರೂ. ಮೌಲ್ಯದ ೩೦೦ ಗ್ರಾಂ ಚಿನ್ನಾಭರಣ, ೨ ಲಕ್ಷ ರೂ. ಮೌಲ್ಯದ ಎರಡು ಕೆಜಿ ತೂಕದ ಬೆಳ್ಳಿ ನಾಣ್ಯಗಳನ್ನು ದೋಚಿದ್ದಾರೆ.
ಇದನ್ನೂ ಓದಿ:-ಉದ್ಯೋಗಾಕಾಂಕ್ಷಿಗಳಿಗೆ ಗುಡ್ ಗ್ಯೂಸ್ : ವಯೋಮಿತಿ ಸಡಿಲಿಕೆಗೆ ಅಸ್ತು ಎಂದ ಸರ್ಕಾರ
ಅಂಗಡಿಯಲ್ಲಿ ವ್ಯಾಪಾರವಾಗಿದ್ದ ಹಣ ೨೬ ಲಕ್ಷ ರೂ. ನಗದು, ಪತ್ನಿ ಇಟ್ಟಿದ್ದ ೩ ಲಕ್ಷ ರೂ., ೫೦ ಸಾವಿರ ರೂ. ಮೌಲ್ಯದ ಎರಡು ರೇಷ್ಮೆ ಸೀರೆಗಳು, ಬೆಲೆ ಬಾಳುವ ವಾಚ್‌ಗಳು ಸೇರಿ ಒಟ್ಟಾರೆ ೬೧.೫೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಲೂಟಿಯಾಗಿದೆ.
ಈ ಸಂಬಂಧ ಉಮೇಶ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.





