ಡಿಸಿ ಶಿಲ್ಪಾನಾಗ್ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ಮಕ್ಕಳನ್ನು ಕರೆತರಲು ಕ್ರಮ
ಹನೂರು : ಅಂತೂ ಇಂತೂ ಹನೂರು ಶೈಕ್ಷಣಿಕ ವಲಯದ ಪಚ್ಚೆ ದೊಡ್ಡಿ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ಸಿಟಿ ಶಿಲ್ಪ ನಾಗ್ ರವರು ಸಫಾರಿ ವಾಹನವನ್ನು ಬಿಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಹನೂರು ತಾಲೂಕಿನ ಪಚ್ಚೆ ದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ 14 ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ. ಅರಣ್ಯದಲ್ಲಿ ನಡೆದುಕೊಂಡು ಹೋಗುವ ವೇಳೆ ಕಾಡು ಪ್ರಾಣಿಗಳ ದಾಳಿ ಬೀತಿಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಇದೆ ಈ ನಿಟ್ಟಿನಲ್ಲಿ ಸೂಕ್ತ ವಾಹನದ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಶಾಸಕ ಎಂ ಆರ್ ಮಂಜುನಾಥ್ ರವರಿಗೆ ಪತ್ರ ಬರೆದಿದ್ದರು.
ಈ ಸಂಬಂಧ ಆಂದೋಲನ ದಿನಪತ್ರಿಕೆಯಲ್ಲಿ ಡಿಸೆಂಬರ್ 7ರಂದು ಸಿಎಂ ಗೆ ವಿದ್ಯಾರ್ಥಿಗಳ ಪತ್ರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲು ಮನವಿ ಎಂಬ ಶೀರ್ಷಿಕೆಯಡಿ ಮುಖಪುಟದಲ್ಲಿ ವರದಿ ಪ್ರಕಟವಾಗಿತ್ತು.
ವರದಿಗೆ ಎಚ್ಚೆತ್ತ ಹನೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಡಿಸೆಂಬರ್ 8ರಂದು ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳು ಹಾಗೂ ಶಿಕ್ಷಕರಿಂದ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡು ತಹಸಿಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ರಾಜ್ಯದ ಮಹಿಳಾ ನೌಕರರಿಗೆ ಬಿಗ್ ಶಾಕ್: ಸರ್ಕಾರದ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಜಿಲ್ಲಾಧಿಕಾರಿಗಳಾದ ಸಿಟಿ ಶಿಲ್ಪಾ ನಾಗ್ ರವರು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿ ಸಿ ಎಫ್ ಭಾಸ್ಕರ್ ರವರ ಜೊತೆ ಚರ್ಚೆ ನಡೆಸಿ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದರು.
ಡಿ.ಸಿ.ಎಫ್.ಭಾಸ್ಕರ್ ರವರು ಜನವನ ವಾಹನ ಇಲ್ಲದೇ ಇರುವುದರಿಂದ ಸಫಾರಿ ವಾಹನವನ್ನೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಗಳವಾರ ಬೆಳಿಗ್ಗೆಯೇ ಪಚ್ಚೆದೊಡ್ಡಿ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಸಫಾರಿವಾಹನದಲ್ಲಿಯೇ ವಿದ್ಯಾರ್ಥಿಗಳನ್ನು ಕರೆ ತರಲು ಚಾಲನೆ ನೀಡಿದ್ದಾರೆ.
ಡಿಸಿಎಫ್ ಭಾಸ್ಕರ್ ಮಾತನಾಡಿ ಈ ಹಿಂದೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜನ ವಾಹನ ಬಿಡಲಾಗಿತ್ತು. ಆದರೆ ಸಮರ್ಪಕ ನಿರ್ವಹಣೆಯಿಂದ ವಾಹನ ಸಂಚಾರ ಸ್ಥಗಿತವಾಗಿತ್ತು. ಇದೀಗ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಸಫಾರಿ ವಾಹನವನ್ನು ತಾತ್ಕಾಲಿಕವಾಗಿ ಸಂಚರಿಸಲು ತಿಳಿಸಿದ್ದರೂ. ಈ ಹಿನ್ನಲೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಇದ್ದ ಜನವನ ವಾಹನವನ್ನು ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿರುವುದರಿಂದ ವಾಪಸ್ ಪಡೆಯಲು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು, ಈಗಾಗಲೇ ಪ್ರಾಧಿಕಾರದವರ ಜೊತೆ ಚರ್ಚೆ ನಡೆಸಲಾಗಿ ನಾವು ವಾಹನವನ್ನು ವಾಪಸ್ ನೀಡುವುದಿಲ್ಲ ಇಲ್ಲಿನ ಕಾಡಂಚಿನ ಜನರ ಅನುಕೂಲಕ್ಕಾಗಿ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ಎಂದರು.
ಜನ ಹಾಗೂ ವನದ ಸಂರಕ್ಷಣೆಗಾಗಿ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ನಿವಾಸಿಗಳು ಸಹ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಮುಂದಿನ ದಿನಗಳಲ್ಲಿ ಯಾರೊಬ್ಬರು ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು. ಪರಿಸರ, ವನ್ಯಜೀವಿ ಸಂರಕ್ಷಣೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು.ಇನ್ನು ಯಾವುದೇ ಕಾರಣಕ್ಕೂ ವಾಹನವನ್ನು ಸ್ಥಗಿತಗೊಳಿಸುವುದಿಲ್ಲ ನಿರಂತರವಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಸಂಚರಿಸಲಿದೆ ಎಂದು ಭರವಸೆ ನೀಡಿದರು.
ಗುಂಡಿ ಬಿದ್ದಿರುವ ರಸ್ತೆಯನ್ನು ಅರಣ್ಯ ಇಲಾಖೆ ವತಿಯಿಂದ ಮುಚ್ಚಿಸಲಾಗುವುದು, ರಸ್ತೆಯನ್ನು ಅಭಿವೃದ್ಧಿಪಡಿಸಲು ಕೆಲವು ನಿಯಮಗಳು ಇರುವುದರಿಂದ ವಿಳಂಬವಾಗಲಿದೆ ಇರುವ ರಸ್ತೆಯನ್ನೇ ಸಮತಟ್ಟು ಮಾಡಿ ವಾಹನ ಸಂಚರಿಸಲು ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಎ ಸಿ ಎಫ್ ವಿರಾಜ್ ಶ್ರೀ ಕಾಂತ್ ಹೊಸೂರು, ಆರ್ ಎಫ್ ಒ ನಾಗರಾಜು, ಸೂಳೇರಿ ಪಾಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಮುತ್ತುರಾಜು, ಮುಖಂಡ ಜಡೆಸ್ವಾಮಿ,ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾರಾಯಣ ಗೌಡ, ಪಚ್ಚೆ ದೊಡ್ಡಿ ಗ್ರಾಮಸ್ಥರಾದ ಮುನಿರಾಜು, ಶಂಕರ್, ಮಾದೇವ, ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.




