ಬೇಗೂರು(ಗುಂಡ್ಲುಪೇಟೆ ತಾ.): ಸಮೀಪದ ಅರೇಪುರ ಗೇಟ್ ಮತ್ತು ನಿರ್ಮಾಣ ಹಂತದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದ ಬಳಿ ರಾಷ್ಟ್ರೀಯ ಹೆದ್ದಾರಿ ೭೬೬ ರಲ್ಲಿ ಲಾರಿಯ ಹಿಂಬದಿಗೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಕೇರಳದ ಕಲ್ಪೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಬೈಕ್ ಸವಾರ ಲಾರಿಯನ್ನು ಹಿಂದಿಕ್ಕುವ ಸಂದರ್ಭದಲ್ಲಿ ಲಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.
ಮಹಮ್ಮದ್ ರಫಿಕ್ (೨೩) ಮೃತಪಟ್ಟ ಬೈಕ್ ಸವಾರ. ಅಪಘಾತವಾದ ಬಳಿಕ ಬೈಕ್‌ಗೆ ಬೆಂಕಿ ಹೊತ್ತಿಕೊಂಡು ಉರಿದಿದೆ. ರಸ್ತೆಯಲ್ಲಿ ಅಪಘಾತವಾಗಿರುವುದನ್ನು ಗಮನಿಸಿ ಗಾಬರಿಗೊಂಡ ಮೈಸೂರು ಕಡೆಯಿಂದ ಬಂದ ತವೆರಾ ಕಾರು ಚಾಲಕ ರಸ್ತೆ ಪಕ್ಕಕ್ಕೆ ಕಾರು ತಿರುಗಿಸಿ ಕಲ್ಲು ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಜಖಂ ಗೊಂಡಿದೆ. ಕಾರಿನಲ್ಲಿದ್ದವರಿಗೆ ಅಪಾಯವಾಗಿಲ್ಲ. ಬೇಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀರಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.





