ಚಾಮರಾಜನಗರ : ತಾಲ್ಲೂಕಿನ ಗಾಳಿಪುರ ಬಡಾವಣೆಯ ಬಳಿಯ ಬೈಪಾಸ್ ರಸ್ತೆಯಲ್ಲಿ ಬೈಕ್, ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಳಿಪುರ ಬಡಾವಣೆಯ ಫಾರ್ಮನ್ ಎಂಬುವರ ಪುತ್ರ ಮೆಹರಾನ್ (೧೩) ಮೃತ ಬಾಲಕ. ಇತನ ಸಹೋದರ ಫೈಸಲ್, ಮತ್ತಿಬ್ಬರು ಬಾಲಕರಾದ ರಿಹಾನ್, ಅಜಾನ್ ಪಾಷಾ ಗಾಯಗೊಂಡಿದ್ದಾರೆ.
ಶಾಲೆಯ ತರಗತಿಗಳನ್ನು ಮುಗಿಸಿದ ಈ ನಾಲ್ವರು ಬಾಲಕರು ಮೊಪೆಡ್ ಮೂಲಕ ಶನಿವಾರ ಮಧ್ಯಾಹ್ನ ಗಾಳಿಪುರ ಬಡಾವಣೆಯಿಂದ ಕರಿವರದರಾಯನ ಬೆಟ್ಟಕ್ಕೆ ತೆರಳಲು ಬೈಪಾಸ್ ರಸ್ತೆಯನ್ನು ದಾಟಲು ಮುಂದಾಗಿದ್ದಾರೆ. ಈ ವೇಳೆಯಲ್ಲಿ ಸತ್ಯಮಂಗಲ ಕಡೆ ತೆರಳುತ್ತಿದ್ದ ಕಾರು ಮತ್ತು ಮೊಪೆಡ್ ನಡುವೆ ಡಿಕ್ಕಿಯಾಗಿದೆ.
ನಂತರ ಕಾರು ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಲಾರಿಗೂ ಡಿಕ್ಕಿ ಹೊಡೆದಿದೆ. ಮೊಪೆಡ್ ಲಾರಿಯಡಿಗೆ ಸಿಲುಕಿದ್ದು, ರಸ್ತೆಗೆ ಬಿದ್ದ ನಾಲ್ವರು ಬಾಲಕರಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ವಿಷಯ ತಿಳಿದ ಕೂಡಲೇ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹನುಮಂತ ಉಪ್ಪಾರ್ ಹಾಗೂ ಪೇದೆಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಗಾಯಗೊಂಡಿರುವ ಬಾಲಕರಾದ ಫೈಸಲ್, ರಿಹಾನ್, ಅಜಾನ್ ಪಾಷಾ ಎಂಬುವರನ್ನು ನಗರದ ಹೊರ ವಲಯದ ಸಿಮ್ಸ್ ಬೋಧನಾ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆ ಹಾಗೂ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಸಿಮ್ಸ್ ಆಸ್ಪತ್ರೆಗೆ ತೆರಳಿ ಮೃತ ಹಾಗೂ ಗಾಯಗೊಂಡಿರುವ ಬಾಲಕರ ಪೋಷಕರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು.
ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





