Mysore
25
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಸಂಬಳ ನೀಡದಕ್ಕೆ ಮನನೊಂದು ವಾಟರ್‌ ಮ್ಯಾನ್‌ ಆತ್ಮಹತ್ಯೆ ; ಹೊಂಗನೂರು ಗ್ರಾಪಂ ಕಚೇರಿಯಲ್ಲಿ ಘಟನೆ

ಯಳಂದೂರು : ತಾಲ್ಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಸಂಬಳ ನೀಡಲಿಲ್ಲ ಎಂದು ಮನನೊಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಗ್ರಾಮ ಪಂಚಾಯಿತಿಯಲ್ಲಿ ವಾಟರ್‌ವ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕೂಸನಾಯಕ (೬೫) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಇಬ್ಬರು ಹೆಣ್ಣು, ಒಬ್ಬ ಗಂಡು ಮಕ್ಕಳಿದ್ದಾರೆ. ಗ್ರಾಪಂ ಕಟ್ಟಡದ ಕಿಟಕಿ ಸರಳಿಗೆ ಹಗ್ಗ ಬಿಗಿದು ನೇಣುಹಾಕಿಕೊಂಡಿದ್ದಾರೆ. ಇವರು ನೇಣಿಗೆ ಶರಣಾಗುವ ಮೊದಲು ಡೆತ್‌ನೋಟ್‌ನ್ನು ಬರೆದು, ಇದನ್ನು ಪಂಚಾಯಿತಿ ಗೋಡೆಗೆ ಅಂಟಿಸಿದ್ದಾರೆ. ಈ ಡೆತ್‌ನೋಟ್‌ನಲ್ಲಿ ‘ನಾನು ೨೦೧೬ ರಿಂದ ಈ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ನನಗೆ ಕಳೆದ ೨೭ ತಿಂಗಳುಗಳಿಂದಲೂ ಸಂಬಳ ಕೊಟ್ಟಿಲ್ಲ. ಗ್ರಾಪಂ ಪಿಡಿಒ ರಾಮೇಗೌಡ ಹಾಗೂ ಅಧ್ಯಕ್ಷೆ ಪತಿ ಮೋಹನ್ ಕುಮಾರ್ ಎಂಬವರು ನನಗೆ ಕಿರುಕುಳ ನೀಡುತ್ತಿದ್ದರು’ ಎಂದು ತಿಳಿಸಿದ್ದಾರೆ.

‘ಇವರು ನನ್ನ ಆರೋಗ್ಯ ಸರಿಯಿಲ್ಲದಿದ್ದರೂ ರಜೆ ನೀಡಲು ನಿರಾಕರಿಸುತ್ತಿದ್ದರು. ಬೆಳಿಗ್ಗೆ ೮ ರಿಂದ ಸಂಜೆ ೬ ಗಂಟೆವರೆಗೂ ಕಚೇರಿಯಲ್ಲಿದ್ದೆ ಕರ್ತವ್ಯ ನಿರ್ವಹಿಸಬೇಕು ಎಂದು ಮಾನಸಿಕ ಹಿಂಸೆ ನೀಡುತ್ತಿದ್ದರು’ ಎಂದು ಬರೆದಿದ್ದಾರೆ.
ಸಂಬಳದ ವಿಚಾರವಾಗಿ ನನಗೆ ಹೆಚ್ಚಿನ ತೊಂದರೆಯಾಗಿತ್ತು. ನನ್ನ ಕುಟುಂಬ ನಿರ್ವಹಣೆಗೆ ಕಷ್ಟವಾಗಿತ್ತು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒಗೂ ನಾನು ದೂರು ಸಲ್ಲಿಸಿದ್ದರೂ ಅವರೂ ಕೂಡ ಕ್ರಮ ವಹಿಸಿಲ್ಲ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ದಾಖಲಿಸಿದ್ದಾರೆ.

ನನ್ನ ಸಾವಿಗೆ ಪಿಡಿಒ ರಾಮೇಗೌಡ ಹಾಗೂ ಅಧ್ಯಕ್ಷೆ ಪತಿ ಮೋಹನ್‌ಕುವಾರ್ ನೇರ ಹೊಣೆಗಾರರಾಗಿದ್ದಾರೆ ಎಂದು ಬರೆದಿದ್ದಾರೆ. ಸ್ಥಳಕ್ಕೆ ನಗರದ ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನವೀನ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

Tags:
error: Content is protected !!