ಚಾಮರಾಜನಗರ: ಈ ಬಾರಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್ ಅತ್ಯಂತ ವಿಶೇಷವಾಗಿರಲಿದ್ದು, ಇದರಲ್ಲಿ ದೇಶದ 1500ಕ್ಕೂ ಅಧಿಕ ರೈತರನ್ನು ಆಹ್ವಾನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ವಡ್ಡಗೆರೆ ಗ್ರಾಮದ ಕೃಷಿಕ ದಂಪತಿ ಚಿನ್ನಸ್ವಾಮಿ ಹಾಗೂ ಅವರ ಪತ್ನಿ ಕೆ.ಎಸ್.ಗಿರಿಕನ್ಯೆ ಅವರು ದೆಹಲಿಯ ಕರ್ತವ್ಯಪಥದಲ್ಲಿ ಆಯೋಜಿಸಲಾಗಿರುವ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕೇಂದ್ರ ಸರ್ಕಾರ ನಡೆಸುತ್ತಿರುವ ವಿವಿಧ ಕೃಷಿ ಮತ್ತು ರೈತ ಕಲ್ಯಾಣ ಯೋಜನೆ ಲಾಭ ಪಡೆಯುತ್ತಿರುವ ರೈತರನ್ನು ಈ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ವಿಶೇಷವೆನಿಸಿದೆ.
ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಹಾಗೂ ಅವರ ಪತ್ನಿಯನ್ನು ವಿಮಾನದ ಮೂಲಕ ನವದೆಹಲಿಗೆ ಕರೆದುಕೊಂಡು ಹೋಗಲಾಗುತ್ತದೆ.
ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯವು ಈ ಕೃಷಿಕ ದಂಪತಿಯನ್ನು ಆಹ್ವಾನಿಸಿದೆ. ರಾಜ್ಯದಿಂದ ಆಯ್ಕೆಯಾಗಿರುವ ಈ ಕೃಷಿಕ ದಂಪತಿ ಜನವರಿ.25ರಂದು ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದು, ಜನವರಿ.28ರಂದು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.