ಚಾಮರಾಜನಗರ: ಕಳೆದ 2 ದಿನಗಳ ಹಿಂದೆ ಸ್ಮಶಾನವಿಲ್ಲದೆ ಗ್ರಾಂ.ಪಂ ಮುಂಭಾಗವೇ ಶವ ಸಂಸ್ಕಾರ ನೆರವೇರಿಸಿದ್ದ ಮಾಂಬಳ್ಳಿ ಗ್ರಾಮಸ್ಥರಿಗೆ ಕೂಡಲೇ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಮಾಂಬಳ್ಳಿ ಗ್ರಾಮಸ್ಥರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮಸ್ಥರೇ ಸೂಚಿಸಿರುವ ಸರ್ವೇ ನಂ.೯೦೨ ರಲ್ಲಿ ಬರುವ ಸುಮಾರು ೩ ಎಕರೆ ಜಾಗಕ್ಕೆ ಸಂಬಂಧಿಸಿದ ಮಾಲೀಕರನ್ನು ಕರೆಸಿ ಅವರೊಂದಿಗೆ ಮಾತನಾಡಿ ಅವರು ಒಪ್ಪಿದ್ದಲ್ಲಿ ಜಿಲ್ಲಾಡಳಿತದಿಂದ ಖರೀದಿಸಿ ಸ್ಮಶಾನಕ್ಕಾಗಿ ಜಾಗವನ್ನು ಮೀಸಲಿಡಲಾಗುವುದು ಹಾಗೂ ಸೇತುವೆ ನಿರ್ಮಾಣಕ್ಕೂ ಕೂಡಲೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು ಮಾತನಾಡಿ ಮೊನ್ನೆ ನಡೆದ ಘಟನೆ ಅಚಾತುರ್ಯದಿಂದಾಗಿ ನಡೆಯಿತು ಹೆಣ ಇಟ್ಟು ೨ ದಿವಸ ಆಗಿತ್ತು ಆಗಾಗಿ ಏನು ಮಾಡಲು ಸಾಧ್ಯವಾಗಲಿಲ್ಲ. ಗ್ರಾಮದ ರುದ್ರಭೂಮಿ ಸಮಕ್ಷಮ ಸಮಿತಿ ವತಿಯಿಂದ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ.
ಗ್ರಾಮದಲ್ಲಿ ಜಮೀನು ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ಪರಿಶಿಷ್ಟರ ಸಂಖ್ಯೆ ಹೆಚ್ಚಾಗಿದ್ದು ಗ್ರಾಮದ ಜ್ವಲಂತ ಸಮಸ್ಯೆಯಾದ ಸ್ಮಶಾನಕ್ಕೆ ಸೂಕ್ತ ಪರಿಹಾರ ನೀಡಬೇಕಾಗಿದೆ ಎಂದು ಮನವಿ ಮಾಡಿದರು.
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಮಾತನಾಡಿ ವಿಷಯವನ್ನು ಒಂದು ಹಂತಕ್ಕೆ ತಂದಿದ್ದೇವೆ, ಜಾಗವನ್ನು ಖರೀದಿಸುವಂತೆ ಕೇಳಿದ್ದೀರಿ ಮಾಲೀಕರೊಂದಿಗೆ ಕೂಡಲೇ ಮಾತನಾಡಿ ಈ ಗೊಂದಲಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಎಸ್.ಶಿವಕುಮಾರ್, ಆರ್. ಎಎಸ್ಪಿ ಸುಂದರ್ ರಾಜ್ ಹಾಗೂ ಇತರರು ಉಪಸ್ಥಿತರಿದ್ದರು.