Mysore
29
overcast clouds

Social Media

ಶನಿವಾರ, 13 ಜೂನ್ 2026
Light
Dark

ಚಾ.ನಗರ : ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ಬಳಿ ಹರಿದು ಬಂತು ಜನಸಾಗರ

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ಮಹಾಲಯ ಅಮಾವಾಸ್ಯೆಯ ಅಂಗವಾಗಿ ವಿವಿಧ ಉತ್ಸವಗಳು ಹಾಗೂ ವಿಶೇಷ ಪೂಜಾ ಪುನಸ್ಕಾರಗಳು ಜರುಗಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮಹಾಲಯ ಅಮಾವಾಸ್ಯೆಯ ಅಂಗವಾಗಿ ಮಾದಪ್ಪನ ಸನ್ನಿಧಿಯನ್ನು ವಿವಿಧ ಪುಷ್ಪಗಳಿಂದ ಸಿಂಗಾರಗೊಳಿಸಲಾಗಿತ್ತಲ್ಲದೇ ದೇಗುಲ ಹಾಗೂ ಗೋಪುರವನ್ನು ವಿವಿಧ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು ಶನಿವಾರ ಸಂಜೆ 6.30ರಿಂದ ರಾತ್ರಿ 8.30ರವರೆಗೆ ಸ್ವಾಮಿಗೆ ಬೇಡಗಂಪಣ ಅರ್ಚಕ ವೃಂದದವರಿಂದ ಎಣ್ಣೆಮಜ್ಜನೆ ಸೇವೆ ಧಾರ್ಮಿಕ ವಿಧಿವಿಧಾನದಿಂದ ನಡೆಯಿತು. ಈ ವೇಳೆ ದೇಗುಲದ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಭಾನುವಾರ ಮಹಾಲಯ ಅಮಾವಾಸೆಯ ಹಿನ್ನಲೆ ಬೆಳಗಿನ ಜಾವ ಸ್ವಾಮಿಗೆ ಬಿಲ್ವಾರ್ಚನೆ, ವಿವಿಧ ಅಭಿಷೇಕ ಹಾಗೂ ಮಹಾಮಂಗಳಾರತಿಯೊಂದಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಮಾವಾಸೆ ವಿಶೇಷ ಪೂಜೆಗಳು ಜರುಗಿದವು.

ಆಗಮಿಸಿದ ಭಕ್ತರು ಸಂಪ್ರದಾಯದಂತೆ ದೇಗುಲದ ಮುಂಭಾಗ ಧೂಪ ಹಾಕಿ ಅಂತರಗಂಗೆಯ ಬಳಿ ಪುಣ್ಯಸ್ನಾನ ಮಾಡಿದರು. ಬಳಿಕ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರಲ್ಲದೇ ಆಲಂಬಾಡಿ ಬಸವಮೂರ್ತಿಗೂ ಪೂಜೆ ಸಲ್ಲಿಸಿದರು. ಪ್ರಾಧಿಕಾರದ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವ ವಾಹನಗಳ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ಸವವು ದೇಗುಲದ ಸುತ್ತಲೂ ಜರುಗಿತು. ಈ ವೇಳೆ ಭಕ್ತರು ‘ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಜಯಘೋಷಗಳನ್ನು ಮೊಳಗಿಸುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.

ಮಹಾಲಯ ಅಮವಾಸೆ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟದ ರಾಜಗೋಪುರ, ಗರ್ಭಗುಡಿ ಗೋಪುರ,ಅಂತರಗಂಗೆ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ತಮಿಳುನಾಡು ಸೇರಿದಂತೆ ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಕನಕಾಪುರ, ಹೆಚ್.ಡಿ. ಕೋಟೆ, ಪಿರಿಯಾಪಟ್ಟಣ, ನಂಜನಗೂಡು, ನರಸೀಪುರ ಹಾಗೂ ಇನ್ನಿತರ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಪ್ರಾಧಿಕಾರದ ವತಿಯಿಂದ ಕುಡಿವ ನೀರಿನ ವ್ಯವಸ್ಥೆ, ವಿಶೇಷ ದಾಸೋಹ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಶೌಚಗೃಹದ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿತ್ತಲ್ಲದೇ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!