Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ಆಕಾಶವಾಣಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಗತಕಾಲಕ್ಕೆ ಸರಿದಿರುವ ರೇಡಿಯೋಗಳ ದರ್ಶನ; ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ

ಮೈಸೂರು: ಕನ್ನಡದ ನುಡಿ ಸೇವೆಯಲ್ಲಿ ನಿತ್ಯ ನಿರಂತರವಾಗಿರುವ ಆಕಾಶವಾಣಿ ಮೈಸೂರು ಕೇಂದ್ರದಲ್ಲಿ ಶುಕ್ರವಾರ ಕನ್ನಡ ಹಬ್ಬ ಅತ್ಯಂತ ಸಂಭ್ರಮ ಸಡಗರದಿಂದ ನೆರವೇರಿತು.

ಕೇಂದ್ರದ ಆವರಣದಲ್ಲಿ ಕನ್ನಡ ಧ್ವಜ ಹಾರಾಡಿತು. ವೀರಗಾಸೆ ಕಲಾವಿದರು ನೃತ್ಯದ ಮೂಲಕ ಶ್ರೋತೃಗಳನ್ನು ಸ್ವಾಗತಿಸಿದರು. ಆಕಾಶವಾಣಿ ಕೇಂದ್ರಕ್ಕೆ ಭೇಟಿ ನೀಡಿದ ಹಿರಿಯ ಶ್ರೋತೃಗಳು ಸಂಭ್ರಮಿಸಿದರು. ಹಾಗೆಯೇ ಆಕಾಶವಾಣಿಯೊಂದಿಗಿನ ನಂಟನ್ನು ಹಂಚಿಕೊಂಡು ಖುಷಿಪಟ್ಟರು. ಕೆಲವರು ರಂಗ ಗೀತೆಗಳನ್ನು ಹಾಡಿದರು. ಮತ್ತೆ ಕೆಲವರು ಚುಟುಕು ವಾಚಿಸಿ ಸಂಭ್ರಮಿಸಿದರು.

ಮೈಸೂರು ಮಾತ್ರವಲ್ಲದೇ ವಿವಿಧ ಜಿಲ್ಲೆಗಳ ಶ್ರೋತೃಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಧ್ವನಿ ಮುದ್ರಣ, ಪ್ರಸಾರ ಸ್ಟುಡಿಯೋಗಳಿಗೆ ಪ್ರವೇಶ ನೀಡಿ ಸಂಕ್ಷೀಪ್ತವಾಗಿ ಮಾಹಿತಿ ಪಡೆದರು. ಮೈಸೂರು ಸಹಾಯಕ ನಿರ್ದೇಶಕ ಎಸ್.ಎಸ್.ಉಮೇಶ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಕನ್ನಡ ಹಬ್ಬಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಎಸ್.ಎಸ್.ಉಮೇಶ್ ಅವರು, ಆಕಾಶವಾಣಿ ಕನ್ನಡ ಹಬ್ಬ ಗತ ವೈಭವವನ್ನು ನೆನಪಿಸುವ ಕಾರ್ಯಕ್ರಮವಾಗಿದೆ. ಕೇಂದ್ರಕ್ಕೆ ಮುಕ್ತ ಪ್ರವೇಶ ನೀಡಿದ್ದೇವೆ. ನಮ್ಮ ಕಾರ್ಯವೈಖರಿಯನ್ನು ವೀಕ್ಷಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮ ಯಶಸ್ಸುಗೊಳಿಸಿದ್ದಾರೆ ಎಂದು ತಿಳಿಸಿದರು.

ಎನ್‌ಸಿಸಿ ೧೪ ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಮನೀಶ್ ಪ್ರಸಾದ್, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕರಾದ ಪ್ರೊ.ಎಂ.ಪುಷ್ಪಾವತಿ, ಜಿಎಸ್‌ಎಸ್‌ಎಸ್ ಫೌಂಡೇಷನ್ ಶ್ರೀಹರಿ ಮತ್ತಿತರರು ಭಾಗವಹಿಸಿದ್ದರು.

ಆಕಾಶವಾಣಿಯ ಧ್ವನಿ ಮುದ್ರಣ, ಪ್ರಸಾರ ಸ್ಟುಡಿಯೋಗಳಿಗೆ ಪ್ರವೇಶ ನೀಡಿದ ವಿವಿಧ ಜಿಲ್ಲೆಗಳ ಶ್ರೋತೃಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಕ್ಷೀಪ್ತವಾಗಿ ಮಾಹಿತಿ ಪಡೆದರು.

ಆರೋಗ್ಯ ತಪಾಸಣೆ: ಮಹಾನ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹಿರಿಯ ನಾಗರಿಕರು ಆರೋಗ್ಯ ಪರೀಕ್ಷೆಗೆ ಒಳಗಾದರು. ವೈದ್ಯರಿಂದ ಸಲಹೆ ಪಡೆದುಕೊಂಡು ಸ್ಥಳದಲ್ಲಿಯೇ ರಕ್ತದೊತ್ತಡ, ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಂಡರು. ಗೋಪಾಲಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಪುಸ್ತಕ ಮಾರಾಟ: ನವೆಂಬರ್ ಮಾಸದ ಅಂಗವಾಗಿ ಪುಸ್ತಕಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿತ್ತು. ಸಾರ್ವಜನಿಕರು ತಮ್ಮ ಮೆಚ್ಚಿನ ಲೇಖಕರ ಪುಸ್ತಕಗಳನ್ನು ಖರೀದಿಸಿದರು. ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ಬಗ್ಗೆ ಮಾಹಿತಿ ನೀಡಿದರು.

ಗತಕಾಲಕ್ಕೆ ಸರಿದ ರೇಡಿಯೋಗಳ ದರ್ಶನ
ಗತಕಾಲಕ್ಕೆ ಸರಿದಿರುವ ವಿವಿಧ ಮಾದರಿಯ ರೇಡಿಯೋಗಳ ಪ್ರದರ್ಶನ ಆಕಾಶವಾಣಿ ಮೈಸೂರು ಕೇಂದ್ರದ ಕನ್ನಡ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತು. ೫೦ ವರ್ಷಗಳ ಹಿಂದೆ ಬಳಕೆಯಲ್ಲಿದ್ದ ರೇಡಿಯೋ, ಉಪಕರಣಗಳ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು. ಆಕಾಶವಾಣಿ ಮೈಸೂರು ಕೇಂದ್ರದ ತಂತ್ರಜ್ಞ ವೆಂಕಟೇಶ್ ಅವರು, ಯುವಕರಿಗೆ ಮಾಹಿತಿ ನೀಡಲೆಂದು ಪ್ರದರ್ಶನ ಏರ್ಪಡಿಸಲಾಗಿದೆ. ಇಲ್ಲಿ ೫೦ ವರ್ಷಗಳ ಹಿಂದೆ ಬಳಸುತ್ತಿದ್ದ ಉಪಕರಣಗಳಿವೆ. ಅವುಗಳಲ್ಲಿ ಟ್ರ್ಯಾನ್ಸ್ ಮೀಟರ್, ಡೈನಾಮಿಕ್, ಮೈಕ್, ಟೆಪ್ ರೆಕಾರ್ಡ್, ಟರ್ನ್ ಟೇಬಲ್ ಕುರಿತು ಮಾಹಿತಿ ನೀಡಿದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ