Mysore
26
overcast clouds

Social Media

ಶುಕ್ರವಾರ, 19 ಜೂನ್ 2026
Light
Dark

ಮೀಸಲಾತಿ ಸಾಂವಿಧಾನಿಕ ಹಕ್ಕು ; ಸಮಾನತೆಯ ಮೆಟ್ಟಿಲು

ಮೀಸಲಾತಿ ಸೌಲಭ್ಯ ಇದ್ದರೂ ಕಠಿಣ ಪರೀಕ್ಷೆ ಪಾಸ್ ಮಾಡಲೇಬೇಕು

ಟಿ.ಕೆ. ಹರೀಶ್
ಐತಿಹಾಸಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಣೆಗೊಳಗಾಗಿ, ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರಾಗಿರುವ ವರ್ಗದ ಜನರಿಗೆ ಸಮಾನ ಅವಕಾಶ ಕಲ್ಪಿಸಲು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮೀಸಲಾತಿ ಅತ್ಯಗತ್ಯ. ಇದು ಕೇವಲ ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ, ಬದಲಿಗೆ ಶತಮಾನಗಳಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಸಾಂವಿಧಾನಿಕ ಹಕ್ಕಾಗಿದೆ. ನಮ್ಮ ದೇಶದಲ್ಲಿ ಮೀಸಲಾತಿ ಜಾರಿಗೆ ಬಂದು ದಶಕಗಳೇ ಕಳೆದಿವೆ. ಆದರೂ ಇಂದಿಗೂ ಮೇಲ್ಜಾತಿಯ ಅನೇಕ ಜನರಲ್ಲಿ ಇದರ ಬಗ್ಗೆ ಹಲವು ತಪ್ಪು ತಿಳಿವಳಿಕೆಗಳಿವೆ. ಸಾಮಾಜಿಕ ಸಮಾನತೆಗಾಗಿ ತಂದ ಈ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಇಂತಹ ಗೊಂದಲಗಳು ಉಂಟಾಗಿವೆ.

ಮೀಸಲಾತಿ ಇರುವ ಕಾರಣಕ್ಕೆ ಅರ್ಹತೆ ಇಲ್ಲದವರು ಹುದ್ದೆ ಪಡೆಯುತ್ತಾರೆ ಎನ್ನುವುದು ತಪ್ಪು. ಪರಿಶಿಷ್ಟ ಜಾತಿ ಅಥವಾ ಮೀಸಲಾತಿ ಸೌಲಭ್ಯ ಪಡೆಯುವ ಅಭ್ಯರ್ಥಿಗಳೂ ಕಠಿಣ ಪರೀಕ್ಷೆಗಳನ್ನು ಪಾಸ್ ಮಾಡಬೇಕಾಗುತ್ತದೆ. ಅವರಿಗೆ ಕನಿಷ್ಠ ಅಂಕಗಳ ಅರ್ಹತೆ ಇದ್ದೇ ಇರುತ್ತದೆ. ಎಲ್ಲರಿಗೂ ಒಂದೇ ರೀತಿಯ ಆರಂಭಿಕ ಸೌಲಭ್ಯಗಳು ಸಿಗದ ಕಾರಣ, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಅಳೆಯುವುದು ಸರಿಯಲ್ಲ. ಮೀಸಲಾತಿಯು ಕೇವಲ ಅವಕಾಶಗಳನ್ನು ಕಲ್ಪಿಸುತ್ತದೆಯೇ ಹೊರತು ಅರ್ಹತೆಯನ್ನಲ್ಲ. ಮೀಸಲಾತಿ ಪಡೆದವರು ಕೂಡ ಸಾಮಾನ್ಯ ಅರ್ಹತೆಯ ಪರೀಕ್ಷೆಗಳನ್ನು ಬರೆದು, ಕಠಿಣ ಸ್ಪರ್ಧೆಯ ಮೂಲಕವೇ ಉತ್ತೀರ್ಣರಾಗಬೇಕಾಗುತ್ತದೆ. ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯಾಪ್ತಿಯು ಕೇವಲ ಶೇಕಡಾ ೧೫ ರಿಂದ ೧೭ ರಷ್ಟು ಮಾತ್ರ ಇದೆ. ಇನ್ನುಳಿದ ಬಹುಪಾಲು ಉದ್ಯೋಗಗಳು ಮತ್ತು ಉನ್ನತ ಶ್ರೇಣಿಯ ಹುದ್ದೆಗಳು ಸಾಮಾನ್ಯ ವರ್ಗದವರಿಗೇ ಮೀಸಲಾಗಿರುತ್ತವೆ. ಅಲ್ಲದೆ, ಖಾಸಗಿ ವಲಯದಲ್ಲಿ ಮೀಸಲಾತಿಯ ಯಾವುದೇ ಅವಕಾಶಗಳಿಲ್ಲ.

ಸಾಮಾನ್ಯ ವರ್ಗದ ಸೀಟುಗಳು ಯಾವುದೇ ನಿರ್ದಿಷ್ಟ ಜಾತಿಗೆ ಮೀಸಲಾಗಿರುವುದಿಲ್ಲ. ಯಾವುದೇ ವರ್ಗದ (sc st obc) ಅಭ್ಯರ್ಥಿಗಳು ತಮ್ಮ ಪ್ರತಿಭೆಯ ಆಧಾರದ ಮೇಲೆ ಸಾಮಾನ್ಯ ವರ್ಗದ ಸೀಟುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಮೀಸಲಾತಿ ಸಿಕ್ಕ ತಕ್ಷಣ ಎಲ್ಲರೂ ಶ್ರೀಮಂತರಾಗಿಲ್ಲ. ಇಂದಿಗೂ ಮೀಸಲಾತಿ ವ್ಯಾಪ್ತಿಗೆ ಬರುವ ಶೇಕಡಾ ೮೦ಕ್ಕಿಂತ ಹೆಚ್ಚು ಜನರು ಹಳ್ಳಿಗಳಲ್ಲಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಕೆಲವೇ ಕೆಲವು ಕುಟುಂಬಗಳು ಮೀಸಲಾತಿಯನ್ನು ಉಪಯೋಗಿಸಿಕೊಂಡು ಮುಂದೆ ಬಂದಿರಬಹುದು. ಆದರೆ ಇಂದಿಗೂ ಬಹುಪಾಲು ಜನರಿಗೆ ಕೂಲಿ ಕೆಲಸವೇ ಆಧಾರವಾಗಿದೆ. ಇಂದಿಗೂ ಜಾತಿ ನಿಂದನೆ ಮತ್ತು ತಾರತಮ್ಯಗಳು ಸಂಪೂರ್ಣವಾಗಿ ನಿಂತಿಲ್ಲ.

ಒಟ್ಟು ಉದ್ಯೋಗಗಳಲ್ಲಿ ಮೀಸಲಾತಿ ಇರುವುದು ಕೇವಲ ಸರ್ಕಾರಿ ವಲಯದಲ್ಲಿ ಮಾತ್ರ. ಆದರೆ ಇಂದು ದೇಶದಲ್ಲಿ ಖಾಸಗಿ ವಲಯ ತುಂಬಾ ದೊಡ್ಡದಾಗಿದೆ. ಅಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ. ಹಾಗಾಗಿ ಸರ್ಕಾರಿ ಹುದ್ದೆಗಳ ಕೊರತೆಗೆ ಮೀಸಲಾತಿಯನ್ನು ದೂಷಿಸುವುದು ತಪ್ಪು.

ಮೀಸಲಾತಿ ಎನ್ನುವುದು ಯಾರದ್ದೋ ಹಕ್ಕನ್ನು ಕಸಿದುಕೊಳ್ಳುವ ವ್ಯವಸ್ಥೆಯಲ್ಲ. ಬದಲಿಗೆ ಹಿಂದೆ ಬಿದ್ದಿರುವ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಒಂದು ಸೇತುವೆ. ಸಮಾಜದಲ್ಲಿ ಎಲ್ಲರಿಗೂ ಸಮಾನ ಗೌರವ ಮತ್ತು ಅವಕಾಶ ಸಿಕ್ಕಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ.

ಮೀಸಲಾತಿಯ ಬಗ್ಗೆ ಮೇಲ್ಜಾತಿ ಜನರಲ್ಲಿ ಇರುವ ತಪ್ಪು ತಿಳಿವಳಿಕೆಗಳು ಮತ್ತು ಅಪನಂಬಿಕೆಗಳಿಗೆ ಪ್ರಮುಖವಾಗಿ ಐತಿಹಾಸಿಕ ಅರಿವಿನ ಕೊರತೆ, ಸಾಮಾಜಿಕ ಅಂತರದ ಮನೋಭಾವನೆಗಳು ಕಾರಣವಾಗಿವೆ. ದುರ್ಬಲ ವರ್ಗದವರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲರಾದಾಗ ಇಡೀ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿ ಹೆಚ್ಚುತ್ತದೆ ಎನ್ನುವುದರ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ.

ಶತಮಾನಗಳಿಂದ ಶಿಕ್ಷಣ, ಆಸ್ತಿ ಮತ್ತು ಉದ್ಯೋಗದಿಂದ ವಂಚಿತರಾದ ಜನರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಮೀಸಲಾತಿ ಅತ್ಯಗತ್ಯವಾಗಿದೆ. ಇದು ಸಾಮಾಜಿಕ ನ್ಯಾಯದ ಒಂದು ಭಾಗವಾಗಿದೆ ಎಂಬುದನ್ನು ಸಂವಾದಗಳ ಮೂಲಕ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ. ಮೀಸಲಾತಿಯು ಅರ್ಹತೆಯ ವಿರೋಧಿಯಲ್ಲ. ಇದು ಸಮಾನ ಅವಕಾಶವಿಲ್ಲದೆ ಸ್ಪರ್ಸಧಿಲು ಸಾಧ್ಯವಾಗದ ಜನರಿಗೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಲ್ಲಲು ನೀಡುವ ಒಂದು ‘ಆರಂಭಿಕ’ ಬೆಂಬಲ ಅಷ್ಟೆ. ಮೀಸಲಾತಿ ಎಂದರೆ ಯಾರಿಗೂ ಅನ್ಯಾಯ ಮಾಡುವುದಲ್ಲ. ಬದಲಿಗೆ, ಸ್ಪರ್ಧೆಯಲ್ಲಿ ಹಿಂದುಳಿದವರಿಗೆ ಸಮಾನವಾಗಿ ಓಡಲು ಸಹಾಯ ಮಾಡುವ ‘ಸಮಾನತೆಯ ಮೆಟ್ಟಿಲು’. ಎಲ್ಲರೂ ಜೊತೆಯಾಗಿ ಬೆಳೆದಾಗ ಮಾತ್ರ ನಿಜವಾದ ಸಮ ಸಮಾಜ ನಿರ್ಮಾಣವಾಗುತ್ತದೆ.

ಮೀಸಲಾತಿ ಅರ್ಥೈಸುವ ಕಥೆ
ಒಂದು ಸುಂದರವಾದ ಹಳ್ಳಿ. ಅಲ್ಲಿನ ಮಕ್ಕಳಿಗೆ ಓದುವುದೆಂದರೆ ಬಹಳ ಆಸಕ್ತಿ. ಆದರೆ, ಆ ಹಳ್ಳಿಯ ಒಂದು ದೊಡ್ಡ ತೋಟದ ಒಳಭಾಗದಲ್ಲಿರುವ ಶ್ರೀಮಂತರ ಮಕ್ಕಳಿಗೆ ಎಲ್ಲಾ ರೀತಿಯ ಒಳ್ಳೆಯ ಪುಸ್ತಕಗಳು, ಅತ್ಯುತ್ತಮ ಶಾಲೆಗಳು ಮತ್ತು ಉತ್ತಮ ತರಬೇತಿ ಸೌಲಭ್ಯಗಳು ಸುಲಭವಾಗಿ ಸಿಗುತ್ತಿದ್ದವು. ಅದೇ ಹಳ್ಳಿಯ ಹೊರವಲಯದಲ್ಲಿ, ಕೆಳಜಾತಿಯ ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಬಡ ಮಕ್ಕಳಿದ್ದರು. ಅವರು ಕೇವಲ ಕೆಲಸ ಮಾಡುವುದರಲ್ಲಿಯೇ ದಿನ ಕಳೆಯುತ್ತಿದ್ದರು.
ಶಾಲೆಯೆಂಬುದು ಇವರಿಗೊಂದು ಕನಸಾಗಿತ್ತು. ಊರಿನಲ್ಲಿ ಒಂದು ದೊಡ್ಡ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ ದೊಡ್ಡ ಬಹುಮಾನ ಮತ್ತು ಮುಂದೆ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗುತ್ತಿತ್ತು. ತೋಟದ ಶ್ರೀಮಂತ ಮನೆಯ ಮಕ್ಕಳಿಗೆ ಚೆನ್ನಾಗಿ ಓಡಲು ಅಭ್ಯಾಸವಿತ್ತು, ಜೊತೆಗೆ ಅವರೆಲ್ಲರೂ ಅತ್ಯುತ್ತಮ ಬೂಟುಗಳನ್ನು ಧರಿಸಿದ್ದರು. ಆದರೆ, ಹಿಂದುಳಿದ ಬಡ ಮಕ್ಕಳಿಗೆ ಸರಿಯಾದ ಚಪ್ಪಲಿಗಳೂ ಇರಲಿಲ್ಲ, ಓಡಲು ಯಾವುದೇ ತರಬೇತಿಯೂ ಇರಲಿಲ್ಲ. ಸ್ಪರ್ಧೆಯು ಆರಂಭವಾಯಿತು. ಶ್ರೀಮಂತ ಮಕ್ಕಳು ತಕ್ಷಣವೇ ಓಡಿ ಮುಂದೆ ಹೋದರು. ಅದೇ ಸಮಯದಲ್ಲಿ, ತೀರ್ಪುಗಾರರು ಈ ಅಸಮಾನತೆಯನ್ನು ಗಮನಿಸಿದರು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಆಗ ಮಾತ್ರ ನ್ಯಾಯಯುತ ಸ್ಪರ್ಧೆಯಾಗಲು ಸಾಧ್ಯ ಎಂದು ಅವರು ಯೋಚಿಸಿದರು. ಅದಕ್ಕಾಗಿ, ಅವರು ಬಡ ಮಕ್ಕಳಿಗೆ ಓಡಲು ಅನುಕೂಲವಾಗುವಂತೆ ಸ್ವಲ್ಪ ದೂರವನ್ನು ಮುಂಚಿತವಾಗಿ ಕ್ರಮಿಸಲು ಅವಕಾಶ ಮಾಡಿಕೊಟ್ಟರು (ಇದೇ ಮೀಸಲಾತಿ).
ಈ ವಿಶೇಷ ಅವಕಾಶದಿಂದಾಗಿ ಬಡ ಮಕ್ಕಳು ಶ್ರೀಮಂತ ಮಕ್ಕಳ ಜೊತೆಯಾಗಿ ಓಡಲು ಸಾಧ್ಯವಾಯಿತು. ಕ್ರಮೇಣ ಅವರಿಗೂ ತಮ್ಮ ಪ್ರತಿಭೆಯನ್ನು ತೋರಿಸಲು, ಕಲಿಯಲು ಮತ್ತು ಬೆಳೆಯಲು ಉತ್ತಮ ವೇದಿಕೆ ಸಿಕ್ಕಿತು.

(ಲೇಖಕರು, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ)

Tags:
error: Content is protected !!