Mysore
21
scattered clouds

Social Media

ಸೋಮವಾರ, 15 ಜೂನ್ 2026
Light
Dark

ಅಂಗನವಾಡಿ ನೌಕರರ ವೇತನ, ಗ್ರಾಚ್ಯುಯಿಟಿ ಆದೇಶ ಜಾರಿಗೆ ಆಗ್ರಹ

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ

ಮೈಸೂರು: ವೇತನ ಮತ್ತು ಗ್ರಾಚುಯಿಟಿ ಆದೇಶ ಜಾರಿಗೊಳಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ,ಯುಕೆಜಿ ಪ್ರಾರಂಭಿಸಬೇಕು ಎಂಬುದೂ ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಗುರುವಾರ ನಗರದ ರಾಮಸ್ವಾಮಿ ವೃತ್ತದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಲ್ಲಿ ಜಮಾವಣೆಗೊಂಡರಲ್ಲದೆ, ನೌಕರರ ಗ್ರಾಚುಯಿಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು. ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಬೇಕು. ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಾಗಬೇಕು. ಉಚಿತ ಕೆಲಸ ನಿಲ್ಲಿಸಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು. ನ್ಯಾಯಯುತ ಮುಂಬಡ್ತಿಗಳನ್ನು ನೀಡಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಹೊಸದಾಗಿ ಪ್ರಾರಂಭವಾಗುತ್ತಿರುವ ೪,೫೦೦ ಅಂಗನವಾಡಿ ಕೇಂದ್ರಗಳನ್ನು ಈಗಾಗಲೇ ಇರುವ ಅಂಗನವಾಡಿ ಕೇಂದ್ರಗಳ ಅನ್ವಯ ಪೂರ್ಣ ಕೇಂದ್ರಗಳಾಗಿ ಪರಿವರ್ತಿಸಬೇಕು. ೧೨ ಲಕ್ಷ ರೂ. ಬದಲಿಗೆ ೨೦ ಲಕ್ಷ ರೂ. ಅನುದಾನ ನೀಡಬೇಕು. ಮಕ್ಕಳಿಗೆ ಸಮವಸ್ತ್ರ, ಶೂ, ಪುಸ್ತಕ, ಬ್ಯಾಗ್‌ಗಳನ್ನು ಉಚಿತವಾಗಿ ನೀಡಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಲ ರೀತಿಯ ಗುಣಾತ್ಮಕ ಮೂಲ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷೆ ಎಚ್.ಎಸ್.ಸುನಂದ, ಪ್ರಧಾನ ಕಾರ್ಯದರ್ಶಿ ಪುಷ್ಪಲತಾ, ಎ.ಲತಾ, ಜಯಂತಿ, ವಸಂತಮ್ಮ, ನೀಲಮ್ಮ, ಮಂಗಳ ಗೌರಮ್ಮ, ಹೇಮಾವತಿ ಕಮಲಾಕ್ಷಿ, ಚಂದ್ರಿಕಾ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!