Mysore
25
overcast clouds
Light
Dark

ಆಂದೋಲನ ವಿಶೇಷ ಲೇಖನ : ನೀರಿನಾಟ ಮೈ ಮರೆತರೆ ಪ್ರಾಣಕ್ಕೆ ಕಂಟಕ ಭಾಗ -2

ಬಿ.ಎನ್.ಧನಂಜಯಗೌಡ

ಸುಂದರ ತಾಣಗಳಲ್ಲಿ ಸಾವಿನ ಸಂಚು
ನಾಡಿನಾದ್ಯಂತ ಇಂತಹ ಹಲವು ಸಾವಿನ ತಾಣಗಳಿವೆ. ಸರ್ಕಾರಿ ಭಾಷೆಯಲ್ಲಿ ಹೇಳುವುದಾದರೆ ಇವು ಪ್ರವಾಸಿ ತಾಣಗಳು. ಆದರೆ ಸುರಕ್ಷತೆಯ ಬಗ್ಗೆ ಒಂದಷ್ಟೂ ನಿಗಾ ಇಲ್ಲದ ಈ ಸ್ಥಳಗಳಲ್ಲಿ ಜೀವ ಬಲಿ ನಿರಂತರವಾಗಿ ನಡೆಯುತ್ತಲೇ ಇದೆ. ತಲಕಾಡು, ಬಲಮುರಿ, ಎಡಮುರಿ ಫಾಲ್ಸ್, ಕೆ.ಆರ್‌ಎಸ್ ಹಿನ್ನೀರು ಪ್ರದೇಶ, ಚುಂಚನಕಟ್ಟೆ, ನಂಜನಗೂಡು ಕಪಿಲೆ, ಟೀ ನರಸೀಪುರ ಸಂಗಮ ಸ್ಥಳ, ಶ್ರೀರಂಗಪಟ್ಟಣದ ಸಂಗಮ ಸ್ಥಳ, ಗಂಜಾಂ, ಪಶ್ಚಿಮವಾಹಿನಿ, ಪಾಂಡವಪುರದ ಕೆರೆ ತೊಣ್ಣೂರು, ಹೊಗೇನಕಲ್ ಫಾಲ್ಸ್, ಭರಚುಕ್ಕಿ- ಗಗನಚುಕ್ಕಿ ಫಾಲ್ಸ್ ಇತ್ಯಾದಿ ಸ್ಥಳಗಳು ಸೌಂದರ‌್ಯದ ಜತೆ ಅಪಾಯದ ತಾಣಗಳು ಹೌದು. ಮಳೆ ಬಂದ ಸಂದರ್ಭದಲ್ಲಿ ಕಾವೇರಿ, ಕಪಿಲಾ, ಲಕ್ಷ್ಮಣತೀರ್ಥ, ಸುವರ್ಣಾವತಿ, ಹೇಮಾವತಿ ನದಿಗಳು ಮಾತ್ರವಲ್ಲ ನೀರಾವರಿ ಕಲ್ಪಿಸುವ ನಾಲೆಗಳೂ ಕೂಡ ಅಪಾಯಕಾರಿ ಸ್ಥಳಗಳಾಗುತ್ತವೆ. ಮಂಡ್ಯ,ಮೈಸೂರು,ಚಾಮರಾಜನಗರ ಜಿಲ್ಲೆಗಳಲ್ಲಿ ಕೆರೆ ತುಂಬಿಸುವ ಯೋಜನೆಯಡಿ ಕೆರೆಗಳು ಭರ್ತಿಯಾಗಿದ್ದು, ಕೆರೆಗಳಲ್ಲಿ ಮತ್ತು ನಾಲೆಗಳಲ್ಲಿ ಈಜಾಡಲು ಹೋಗಿ ಹಲವರು ಸಾವಿನ ಕದ ತಟ್ಟಿದ್ದಾರೆ.

ಹೊಗೇನಕಲ್ ಫಾಲ್ಸ್,
ಹೊಗೇನಕಲ್ ಫಾಲ್ಸ್,
ಬಲಮುರಿ ಫಾಲ್ಸ್,
ಬಲಮುರಿ, ಫಾಲ್ಸ್,

ಬೀಚಿಗಿಳಿಯುವ ಮುನ್ನ…
ಮಂಗಳೂರಿನ ಉಳ್ಳಾಲ ಮತ್ತು ಪಣಂಬೂರು ಬೀಚ್‌ಗಳಲ್ಲಂತೂ ಪ್ರವಾಸಿಗರ ಜಲಸಮಾಧಿ ನಿತ್ಯದ ಸುದ್ದಿ. ಗೋವಾದ ಬೀಚ್‌ಗಳಲ್ಲಿ ವಿಹರಿಸಿದವರು ಇಲ್ಲೂ ಅದೇ ರೀತಿ ಸಮುದ್ರಕ್ಕಿಳಿಯುವ ಸಾಹಸ ಮಾಡುತ್ತಾರೆ. ಆದರೆ ಬಿಳಿ ಮರಳಿನ ಗೋವಾ ಬೀಚ್‌ಗಳಲ್ಲಿ ಸುಮಾರು ನೂರಿನ್ನೂರು ಮೀಟರ್ ದೂರಕ್ಕೆ ಸಮುದ್ರದಲ್ಲಿ ಎದೆಮಟ್ಟದ ನೀರಿರುತ್ತದೆ. ಬೇಕಲಕೋಟೆ, ಉಳ್ಳಾಲ, ಪಣಂಬೂರು, ಮರವಂತೆ, ಮುರುಡೇಶ್ವರ, ಕಾರವಾರದ ಸಮುದ್ರ ತೀರಗಳು ಇದಕ್ಕಿಂತ ಭಿನ್ನ. ಇಲ್ಲಿ ಇಳಿಜಾರಿನಂತಿರುವ ಕಪ್ಪು ಉಸುಕಿನೊಳಗೆ ಕಾಲು ಜಾರುವ ಅವಕಾಶಗಳು ಹೆಚ್ಚು. ಈಜು ತಿಳಿಯದೆ ಆಳೆತ್ತರದ ಅಲೆಗಳಿಗೆ ಎದೆಯೊಡ್ಡಿ ನಿಂತರೆ ಸಮುದ್ರ ಪಾಲಾಗುವುದು ಗ್ಯಾರಂಟಿ. ವಿಹಾರಾರ್ಥ ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗ ಹೆಚ್ಚಿನವರು ಅಪಾಯದ ಬಗ್ಗೆ ಯೋಚಿಸುವುದಿಲ್ಲ. ಕೆಲವರು ಕಂಠಪೂರ್ತಿ ಕುಡಿದು ನೀರಿಗಿಳಿಯುವ ಸಾಹಸ ಮಾಡುತ್ತಾರೆ. ಹೀಗಾಗಿ ಸಾವನ್ನು ತಾವಾಗಿಯೇ ಆಹ್ವಾನಿಸುತ್ತಾರೆ.

ಕೊಡಗಿನ ಜಲಪ್ರಪಾತಗಳು
ನಮ್ಮ ಕೊಡಗಿನ ಜಲಪಾತಗಳ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿ ತಮ್ಮವರನ್ನು ಕಳೆದುಕೊಂಡು ಬದುಕಿಡೀ ಕಣ್ಣೀರಿಡುತ್ತಿರುವ ಕುಟುಂಬಗಳ ಸಂಖ್ಯೆಯೂ ದೊಡ್ಡದಿದೆ. ಮೊನ್ನೆ ಮೊನ್ನೆ ಮೂವರ ಬಲಿ ಪಡೆದ ಅಬ್ಬಿ ಜಲಪಾತದಲ್ಲಿ ಕಳೆದ ೧೦ ವರ್ಷಗಳಲ್ಲಿ ೩೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಚೇಲಾವರ ಜಲಪಾತದ ವೀಕ್ಷಣೆ ಸಂದರ್ಭ ಕೆಳಗೆ ಬಿದ್ದವರು ಬದುಕುಳಿದ ನಿದರ್ಶನ ಕಡಿಮೆ. ಈ ಜಲಪಾತದಲ್ಲಿ ೧೫ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಲ್ಲಳ್ಳಿ ಜಲಪಾತದಲ್ಲಿ ಕಳೆದ ೫ ವರ್ಷಗಳ ಅವಧಿಯಲ್ಲಿ ೭ಕ್ಕೂ ಹೆಚ್ಚು ಮಂದಿ ನೀರುಪಾಲಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಸಮೀಪದ ಇರ್ಪು ಜಲಪಾತ ಕೂಡ ಮಳೆಗಾಲದಲ್ಲಿ ಹೆಚ್ಚು ಅಪಾಯಕಾರಿ. ಇಲ್ಲೂ ಜಾರಿ ಬಿದ್ದವರ ಸಂಖ್ಯೆ ಕಡಿಮೆ ಏನಿಲ್ಲ.

ಇರ್ಪು ಜಲಪಾತ
ಇರ್ಪು ಜಲಪಾತ
ಚೇಲಾವರ ಜಲಪಾತ
ಚೇಲಾವರ ಜಲಪಾತ

ಎಚ್ಚರಿಕೆಯೊಂದೇ ಪರಿಹಾರ..

*ನದಿ, ಕಾಲುವೆ, ಕೆರೆ, ಜಲಪಾತ, ಸಮುದ್ರ ಇತ್ಯಾದಿ ಜಲ ಪ್ರದೇಶಗಳಲ್ಲಿ ಗರಿಷ್ಠ ಎಚ್ಚರಿಕೆ ಅಗತ್ಯ. ಈಜು ಗೊತ್ತಿಲ್ಲದೆ ಈಜುವ, ಆಳಕ್ಕಿಳಿಯುವ ಪ್ರಯತ್ನ ಮಾಡಬಾರದು.

* ಉಕ್ಕಿ ಹರಿಯುವ ನದಿ, ಕಾಲುವೆ, ಜಲಪಾತ ಮುಂತಾದ ಜಾಗಗಳಲ್ಲಿ ನಿಂತು ಸೆಲ್ಫಿ, ಪೋಟೋ ತೆಗೆಯುವಾಗ ಗರಿಷ್ಠ ಎಚ್ಚರಿಕೆ ವಹಿಸಬೇಕು.

*ಯಾರೋ ನದಿ/ಕೆರೆ/ಕಾಲುವೆಯ ಆಳಕ್ಕೆ ಇಳಿದು ಆಟವಾಡುತ್ತಿದ್ದಾರೆ ಎಂಬ ಮಾತ್ರಕ್ಕೆ ಅವರಿಂದ ಪ್ರಭಾವಿತರಾಗಿ ಅತ್ತ ಧಾವಿಸಬಾರದು.

 

ಮುತ್ತತ್ತಿ ಎಂಬ ಆಪತ್ತಿನ ಸ್ಥಳ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಬೆಂಗಳೂರಿಗರ ಪಾಲಿಗೆ ಅಚ್ಚುಮೆಚ್ಚಿನ ತಾಣ. ಬೇಸಿಗೆಯಲ್ಲಿ ಮನಸ್ಸು ಮತ್ತು ದೇಹದ ದಣಿವಾರಿಸಿಕೊಳ್ಳಲು ಈ ಸ್ಥಳ ಹೇಳಿ ಮಾಡಿಸಿದಂತಿದೆ. ಶನಿವಾರ, ಭಾನುವಾರ ಬಂತೆಂದರೆ ಸಾಕು, ನೂರಾರು ಯುವಕರು ಇಲ್ಲಿಗೆ ದಾಳಿಯಿಡುತ್ತಾರೆ. ಆದರೆ ಈ ಸ್ಥಳದಲ್ಲಿ ಇದುವರೆಗೂ ೨೦೦ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಬಹುತೇಕರು ೩೫ರೊಳಗಿನ ವಯೋಮಿತಿಯವರು.

ಮುತ್ತತ್ತಿ
ಮುತ್ತತ್ತಿ

ಸರ್ಕಾರ ವಹಿಸಬಹುದಾದ ಕ್ರಮಗಳು :

* ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಸುರಕ್ಷಿತವಾದ ಪ್ರದೇಶದಲ್ಲಿ ಮಾತ್ರ ಈಜಲು ಅವಕಾಶ ನೀಡುವುದು.

* ಬೀಚ್ ಸೇರಿದಂತೆ ಜಲಕಂಟಕ ಸ್ಥಳಗಳಲ್ಲಿ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು.

* ದೋಣಿ ವಿಹಾರ, ರ್ಯಾಫ್ಟಿಂಗ್‌ನಂತಹ ಸಂದರ್ಭದಲ್ಲಿ ಜೀವ ರಕ್ಷಕ ಉಡುಗೆ (ಲೈಫ್ ಜಾಕೇಟ್) ಕಡ್ಡಾಯಗೊಳಿಸುವುದು.

* ಈಜು ಮತ್ತು ಸೈಕ್ಲಿಂಗ್ ಎರಡರ ತರಬೇತಿಯೂ ನಮ್ಮ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿ ಸಿಗುವಂತಾಗಬೇಕು.

* ಜಲಸುರಕ್ಷತೆ ಕುರಿತು ಎಲ್ಲರಿಗೂ ಅರಿವು ಮೂಡಿಸಬೇಕು. ಶಾಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಪ್ರಥಮ ಚಿಕಿತ್ಸೆಯನ್ನು ಕಲಿಸಬೇಕು.

ಆರ್.ಚೇತನ್, ಮೈಸೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಆರ್.ಚೇತನ್, ಮೈಸೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಅನೇಕ ಬಾರಿ ಈಜು ಬಾರದ ಮಕ್ಕಳು ಈಜು ಕಲಿಯಲು ಹೋಗಿ ನೀರುಪಾಲಾದ ಉದಾಹರಣೆಗಳಿವೆ. ಈಜು ಕಲಿಕೆಯ ಸಾಮಗ್ರಿ (ಟ್ಯೂಬ್)ಗಳನ್ನು ಬಳಸಿ, ಹೆಚ್ಚು ಆಳವಿಲ್ಲದ ಜಾಗದಲ್ಲಿ ಈಜು ಕಲಿಯುವಂತೆ ಮಕ್ಕಳನ್ನು ಅಣಿಗೊಳಿಸಬೇಕು. ಈಜು ಬಂದರೂ ಗೊತ್ತಿರದ ಜಾಗಗಳಲ್ಲಿ ಮಕ್ಕಳು ಆಳ ನೀರಿಗಿಳಿಯದಂತೆ ನೋಡಿಕೊಳ್ಳಬೇಕು. ಈಜಾಡಲು ಅವಕಾಶವಿಲ್ಲ ಎಂಬ ಎಚ್ಚರಿಕೆಯ ಫಲಕವನ್ನು ನಿರ್ಲಕ್ಷಿಸಿ ಈಜಲು ಹೋಗಬಾರದು. ಸುಳಿ ಇರುವ ಪ್ರದೇಶಗಳಿಗೆ ಹೋಗಬಾರದು. ಮಕ್ಕಳ ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರು ಸುರಕ್ಷತೆ ಬಗ್ಗೆ ವಿಶೇಷ ನಿಗಾ ವಹಿಸಬೇಕು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ