ಮೈಸೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ‘ಅಮೃತ ಭಾರತಿಗೆ ಕನ್ನಡದಾರತಿ’ ಎಂಬ ಅಮೃತ ಪುಸ್ತಕ ಮಾರಾಟ ಅಭಿಯಾನ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನವನ್ನು
ಆ.10ರಂದು ನಗರದಲ್ಲಿ ಆಯೋಜಿಸಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆವರಣದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ವಿಜಯಕುಮಾರಿ ಕರಿಕಲ್ ಹಾಗೂ ಪುಸ್ತಕ ಮಾರಾಟಕ್ಕೆ ಪ್ರಾಧ್ಯಾಪಕಿ ಎಸ್.ಡಿ.ಶಶಿಕಲಾ ಚಾಲನೆ ನೀಡುವರು.
ಮಧ್ಯಾಹ್ನ 12 ಗಂಟೆಗೆ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಗಿರಿಧರ ರಾವ್ ಹಾಗೂ ಪುಸ್ತಕ ಮಾರಾಟಕ್ಕೆ ಮಹಾರಾಣಿ ಮಹಿಳಾ ಕಾಲೇಜಿನ ಪ್ರಚಾರ್ಯರಾದ ಪ್ರೊ.ಶ್ರೀನಿವಾಸ್ ಚಾಲನೆ ನೀಡುವರು. ಕನ್ನಡ ವಿಭಾಗದ ಮುಖ್ಯಸ್ಥರಾದ ವಿಜಯಲಕ್ಷ್ಮಿ, ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಎಚ್.ಎಂ.ಕಲಾಶ್ರೀ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ನಲ್ಲತಂಬಿ ಹಾಗೂ ವೈ.ಸಿ.ಭಾನುಮತಿ ಉಪಸ್ಥಿತರಿರುವರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕಗಳು ಶೇ 50ರಷ್ಟು ದರದಲ್ಲಿ ಮಾರಾಟ ಇರುತ್ತದೆ ಎಂದು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ.ವಸಂತಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.