ಮೈಸೂರು: ಅಭಿಮನ್ಯು ಆನೆಯ ಉತ್ತರಾಧಿಕಾರಿಯಾಗಿ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರಬೇಕಿದ್ದ ಗೋಪಾಲಸ್ವಾಮಿ ಈಗ ನೆನಪು ಮಾತ್ರ. ಕಾಡಾನೆಯೊಂದಿಗಿನ ಕಾದಾಟದಲ್ಲಿ ಅಕಾಲಿಕ ಸಾವು ಕಂಡ ದಸರಾ ಆನೆ ಮತ್ತೊಮ್ಮೆ ಸುರಕ್ಷತೆಯ ಪ್ರಶ್ನೆಗಳನ್ನು ಮುಂದಿಟ್ಟಿದೆ. ಕಾಲರ್ ಅಳವಡಿಸಲಾದ ಎರಡು ಆನೆಗಳು ಮುಖಾಮುಖಿಯಾಗುವ ಸನ್ನಿವೇಶವನ್ನು ಮುಂಚಿತವಾಗಿ ಅರಿತು ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ವಿಫಲವಾಯಿತೇ ಎಂಬ ಪ್ರಶ್ನೆ ವನ್ಯಪ್ರೇಮಿಗಳದ್ದು.
ಶಿಬಿರಗಳಲ್ಲಿದ್ದ ಆನೆಗಳು ಮೃತಪಟ್ಟ ಪ್ರಕರಣ ಇದೇ ಹೊಸದೇನಲ್ಲ.
ಮೂರು ವರ್ಷಗಳ ಹಿಂದೆ ಇದೇ ಮತ್ತಿಗೋಡು ಶಿಬಿರದಲ್ಲಿ ದ್ರೋಣ ( ಜೂನಿಯರ್ ) ಹೆಸರಿನ ದಸರಾ ಆನೆ ಹೃದಯಾಘಾತದಿಂದ ಮೃತಪಟ್ಟಿತ್ತು. ಆನೆಯ ಚಿಕಿತ್ಸೆಯಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕೆ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಘಟನೆ ಬಳಿಕ ಎಲ್ಲ ಶಿಬಿರಗಳಲ್ಲೂ ವೈದ್ಯರ ಉಪಸ್ಥಿತಿಗೆ ಕೋರ್ಟ್ ಸೂಚನೆ ನೀಡಿತ್ತು.
2013ರ ಜೂನ್ ನಲ್ಲಿ ಇದೇ ಶಿಬಿರದಲ್ಲಿ ದಸರಾ ಪಡೆಗೆ ಸೇರ್ಪಡೆಯಾಗಬೇಕಿದ್ದ ಶೇಖರ ಹೆಸರಿನ ಆನೆ ತೆಂಗಿನ ಕಾಯಿ ಗಂಟಲಲ್ಲಿ ಸಿಲುಕಿ ಮೃತಪಟ್ಟಿತ್ತು. ಪ್ರವಾಸಿಗರೊಬ್ಬರು ಜುಟ್ಟು ಸಹಿತವಾಗಿ ನೀಡಿದ ತೆಂಗಿನ ಕಾಯಿ ತಿನ್ನಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎಂದು ಆಗ ಸಬೂಬು ನೀಡಲಾಗಿತ್ತು. ಬಂಡೀಪುರದಲ್ಲಿ ನಡೆದ ಇಂಥದ್ದೇ ಪ್ರಕರಣದಲ್ಲಿ ರೋಹಿತ್ ಹೆಸರಿನ ದಸರಾ ಆನೆಯೊಂದು ಮೃತಪಟ್ಟಿತ್ತು.
2015ರ ಮಾರ್ಚ್‌ನಲ್ಲಿ ದಸರಾ ಆನೆಗಳ ಕಾದಾಟದಲ್ಲಿ ಶ್ರೀರಾಮ ಹೆಸರಿನ ಆನೆ ಉಸಿರು ಚೆಲ್ಲಿತ್ತು. ಕೆ.ಗುಡಿ ಶಿಬಿರದಲ್ಲಿ ಮದವೇರಿದ್ದ ಗಜೇಂದ್ರ ಹೆಸರಿನ ಮತ್ತೊಂದು ದಸರಾ ಆನೆ ತನ್ನ ಮಿತ್ರನನ್ನೇ ದಂತದಿಂದ ತಿವಿದು ಸಾಯಿಸಿತ್ತು.
ಎಲ್ಲಕ್ಕಿಂತ ಮನಕಲುಕುವ ಘಟನೆ 1998ರಲ್ಲಿ ಸಂಭವಿಸಿದ ದ್ರೋಣನ ದುರಂತ ಸಾವು. 1981ರಿಂದ -1997 ರ ತನಕ 18 ಬಾರಿ ಅಂಬಾರಿ ಹೊತ್ತಿದ್ದ ದ್ರೋಣ ನಾಗರಹೊಳೆಯ ಬಳ್ಳೆ ಶಿಬಿರದಲ್ಲಿ ವಿದ್ಯುತ್ ಆಘಾತಕ್ಕೆ ಬಲಿಯಾದಾಗ ಇಡೀ ದೇಶವೇ ಮರುಗಿತ್ತು. ಕಾಡಂಚಿಗೆ ಮೇಯಲು ಹೋದ ದ್ರೋಣ ಸೊಂಡಿಲಿನಿಂದ ಮರದ ಟೊಂಗೆಯೊಂದನ್ನು ಮುರಿದು ತಿನ್ನಲು ಪ್ರಯತ್ನಿಸಿದ್ದ. ಆದರೆ ದುರದೃಷ್ಟವಶಾತ್ ಈ ಟೊಂಗೆ ಅಲ್ಲೇ ಹಾದು ಹೋಗಿದ್ದ ಹೈಟೆನ್ಷನ್ ವಯರಿಗೆ ತಗುಲಿ ವಿದ್ಯುತ್ ಸ್ಪರ್ಶವಾಗಿತ್ತು. ದ್ರೋಣನ ಸಾವಿನ ಬಳಿಕ ಅದರ ಮಾವುತ ದೊಡ್ಡಪ್ಪಾಜಿ ಮತ್ತೆಂದೂ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಲಿಲ್ಲ.
ಈ ಘಟನೆ ಸಂಭವಿಸಿ ಈಗ 25 ವರ್ಷಗಳಾಗಿವೆ. ಆದರೆ ದ್ರೋಣನ ನೆನಪು ಇನ್ನೂ ಮಾಸಿಲ್ಲ. ಮಹಾರಾಜರ ಕಾಲದಲ್ಲಿ 7 ಸಾವಿರ ಕಿಲೋ ತೂಕದ ಆನೆಗಳು ಅಂಬಾರಿ ಹೊತ್ತು ನಡೆದಿದ್ದವು. ದ್ರೋಣನೂ ಗಾತ್ರದಲ್ಲಿ, ತೂಕದಲ್ಲಿ ದೈತ್ಯನಾಗಿದ್ದ. ಆದರೆ ಸ್ವಭಾವದಲ್ಲಿ ಅತ್ಯಂತ ಸೌಮ್ಯನಾಗಿದ್ದ. ಮಾವುತನ ಜತೆ, ಕಾವಾಡಿ ಜತೆ ಒಂದು ದಿನವೂ ಮುನಿಸಿಕೊಳ್ಳದೆ ಅನುಸರಿಸಿಕೊಂಡು ಹೋದವನು.
ಸತತ 18 ವರ್ಷ ಅಂಬಾರಿ ಹೊತ್ತಿದ್ದು ಮಾತ್ರವಲ್ಲ, ಆನೆ ಮತ್ತು ಹುಲಿ ಹಿಡಿಯುವ ನೂರಾರು ಕಾರ್ಯಾಚರಣೆಗಳಲ್ಲಿ ಈತ ಭಾಗವಹಿಸಿದ್ದ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ದಿ ಸ್ವೋರ್ಡ್ ಆಫ್ ಟಿಪ್ಪುಸುಲ್ತಾನ್’ ನಲ್ಲಿ ಟಿಪ್ಪು ಪಾತ್ರಧಾರಿ ಕುಳಿತು ಯುದ್ಧಕ್ಕೆ ಸಾಗಿದ ಚಿತ್ರೀಕರಣ ನಡೆದಿದ್ದು ಈ ದ್ರೋಣನ ಮೇಲೆ.
ಬಳ್ಳೆ ಆನೆ ಶಿಬಿರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ದ್ರೋಣ ಮತ್ತು ರಾಜೇಂದ್ರ ಆನೆಯ ನೆನಪಿಗಾಗಿ ಅರಣ್ಯಾಧಿಕಾರಿಗಳು ಸಮಾಧಿ ನಿರ್ಮಿಸಿ ಅವರಿಬ್ಬರ ನೆನಪುಗಳನ್ನು ಶಾಶ್ವತವಾಗಿಸಿದ್ದಾರೆ. ಅರಣ್ಯದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಾಸ್ತಮ್ಮ ಪೂಜಾ ಮಹೋತ್ಸವದ ಸಂದರ್ಭ ದ್ರೋಣ ಮತ್ತು ರಾಜೇಂದ್ರರ ಸಮಾಧಿಗೂ ಪೂಜಾ ಕಾರ್ಯ ನಡೆಯುತ್ತದೆ.