Mysore
23
broken clouds
Light
Dark

ಮುಳ್ಳುಹಂದಿಯ ರೋಷಾವೇಶಕ್ಕೆ ಹೆದರಿ ಓಡಿ ಹೋದ ಚಿರತೆ

ಕೆಆರ್‌ಎಸ್‌ ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ, ಮುಳ್ಳುಹಂದಿ ಜತೆ ಮುಖಾಮುಖಿ

ಮೈಸೂರು: ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಕೃಷ್ಣರಾಜಸಾಗರದ ವಿಶ್ವವಿಖ್ಯಾತ ಬೃಂದಾವನವನ್ನು ಕಳೆದ 15 ದಿನಗಳಿಂದ ಮುಚ್ಚಲಾಗಿದ್ದು ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಚಿರತೆ ಸೆರೆ ಹಿಡಿಯುವ ಅರಣ್ಯ ಇಲಾಖೆ ಕಾರ್ಯಾಚರಣೆ ಇದುವರೆಗೆ ಫಲ ನೀಡಿಲ್ಲ. ಆದರೆ ಈ ಚಿರತೆಯ ಚಲನವಲನ ಮತ್ತೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಮುಳ್ಳುಹಂದಿಯೊಂದನ್ನು ಬೇಟೆಯಾಡಲು ಹೋದ ಚಿರತೆ ಹೆದರಿ ವಾಪಸ್ಸಾಗುವ ದೃಶ್ಯ ಗಮನ ಸೆಳೆದಿದೆ.

ಪ್ರವಾಸಿಗರಿಗೆ ಬೇಸರ ತರಿಸಿರುವ ಚಿರತೆ ಮುಳ್ಳು ಹಂದಿಯ ರೋಷಾವೇಷಕ್ಕೆ ಹೆದರಿ ಓಡಿ ಹೋಗಿದೆ. ಮುಳ್ಳುಹಂದಿಯು ಚಿರತೆಯ ಹತ್ತಿರಕ್ಕೆ ಸಾಗಿ ಬಾಣದಂತಹ ತನ್ನ ಮುಳ್ಳುಗಳನ್ನು ಪ್ರಯೋಗಿಸಲು ಮುಂದಾಗಿದೆ.

ಇದರಿಂದ ತಪ್ಪಿಸಿಕೊಳ್ಳಲು ದೂರ ಸರಿಯುತ್ತಿರುವ ಚಿರತೆ ಬೇಟೆಯನ್ನು ಬಿಟ್ಟು ತೆರಳುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಚಿರತೆಯನ್ನು ಸೆರೆ ಹಿಡಿಯುವ ಉದ್ದೇಶದಿಂದ ಬೃಂದಾವನದ ಸುತ್ತಲೂ ಈಗ ಹೆಚ್ಚುವರಿಯಾಗಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ಬೋನುಗಳನ್ನುಇರಿಸಲಾಗಿದೆ. ಆದರೆ ಬೋನಿಗೆ ಬೀಳದ ಚಿರತೆ ಸಿಸಿಟಿವಿಯಲ್ಲಷ್ಟೇ ಕಾಣಿಸಿಕೊಳ್ಳುತ್ತಿದೆ.

ನವೆಂಬರ್‌ ಆರರಂದು ಚಿರತೆ ಕಾಣಿಸಿಕೊಂಡ ಬಳಿಕ ಬೃಂದಾವನವನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ. ಆಗಾಗ ಕಾಣಿಸಿಕೊಳ್ಳುವ ಚಿರತೆಯನ್ನು ಸೆರೆ ಹಿಡಿಯದ ಹೊರತು ಪ್ರವಾಸಿಗರ ಭೇಟಿಗೆ ಅವಕಾಶ ನೀಡುವುದು ಅಪಾಯಕಾರಿ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿರತೆ ಬಲೆಗೆ ಬೀಳುವ ತನಕ ಬೃಂದಾವನವನ್ನು ಮುಚ್ಚಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಅಕ್ಟೋಬರ್‌ 22ರಂದು ಚಿರತೆ ಮೊದಲ ಬಾರಿ ಬೃಂದಾವನದ ಸಿಸಿಟಿವಿಯಲ್ಲಿ ಪ್ರತ್ಯಕ್ಷವಾಗಿತ್ತು. ಒಂದೆರಡು ದಿನ ಉದ್ಯಾನವನವನ್ನು ಬಂದ್‌ ಮಾಡಿ ಅರಣ್ಯಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಪ್ರವಾಸಿಗರ ಪ್ರವೇಶಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಅಕ್ಟೋಬರ್‌ 28ರಂದು ಚಿರತೆ ಮತ್ತೆ ಕಾಣಸಿಕೊಂಡಿತ್ತು. ನವೆಂಬರ್‌ ಆರರಂದು ಕಾಣಿಸಿಕೊಂಡ ಚಿರತೆ ಈಗ ಮತ್ತೆ ಸಿಸಿಟಿವಿಯಲ್ಲಿ ತನ್ನ ಇರುವನ್ನು ದಾಖಲಿಸಿದೆ.

ಬೃಂದಾವನದ ಬಂದ್‌ ಆಗಿರುವ ಮಾಹಿತಿ ತಿಳಿಯದೆ ಬರುತ್ತಿರುವ ಪ್ರವಾಸಿಗರು ನಿರಾಶರಾಗಿ ಹಿಂತಿರುಗುತ್ತಿದ್ದಾರೆ. ಕರ್ನಾಟಕ ಕೈಗಾರಿಕಾ ಭದ್ರತೆ ಪಡೆಯ 75ಕ್ಕೂ ಹೆಚ್ಚು ಸಶಸ್ತ್ರ ಸಿಬ್ಬಂದಿ ಮತ್ತು ನೂರಕ್ಕೂ ಹೆಚ್ಚು ಸಿಸಿಟಿವಿ ಕಣ್ಗಾವಲು ಇದ್ದರೂ ಈ ಚಿರತೆ ಕನ್ನಂಬಾಡಿ ಕಟ್ಟೆಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದೆ.

ದಿನವೊಂದಕ್ಕೆ ಸಾವಿರಾರು ಜನರು ಭೇಟಿ ಕೊಡುವ ಪ್ರವಾಸಿ ತಾಣ ಬಂದ್ ಆಗಿರುವುದರಿಂದ ಇದರ ಒಡೆತನ ಹೊಂದಿರುವ ಕಾವೇರಿ ನೀರಾವರಿ ನಿಗಮದ ಬೊಕ್ಕಸಕ್ಕೂ ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ