ಮಲ್ಲಯ್ಯನದೊಡ್ಡಿ ಬೋರೆ ಬಳಿ ಶಿಕ್ಷಕರ ಕುಟುಂಬ ಮೇಲೆ ದಾಳಿ
ಮುಸುಕುಧಾರಿ ಯುವಕರಿಂದ ಮಧ್ಯರಾತ್ರಿಯಲ್ಲಿ ಕುಕೃತ್ಯ
ಮಂಡ್ಯ: ಬೆಂಗಳೂರಿನಿಂದ ಮೈಸೂರಿಗೆ ವಾಪಸಾಗುತ್ತಿದ್ದ ಶಿಕ್ಷಕರ ಕುಟುಂಬದ ಮೇಲೆ ದಾಳಿ ವಾಡಿದ ುಯುವಕರಿಬ್ಬರು ನಗದು ಹಾಗೂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಮಲ್ಲಯ್ಯನದೊಡ್ಡಿ ಬೋರೆ ಬಳಿ ಭಾನುವಾರ ರಾತ್ರಿ ಮಧ್ಯರಾತ್ರಿ ನಡೆದಿದೆ.
ಮೈಸೂರಿನ ಅಶೋಕಪುರಂ ರೈಲ್ವೆ ವರ್ಕ್ ಶಾಪ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ನಾಗರಾಜು ಹಾಗೂ ಅವರ ಪತ್ನಿ ಜಯಶ್ರೀ ದರೋಡೆಗೆ ಒಳಗಾದವರು.
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪುತ್ರನನ್ನು ಭೇಟಿ ಮಾಡಲು ನಾಗರಾಜು ದಂಪತಿ ಭಾನುವಾರ ಮಧ್ಯಾಹ್ನ ತೆರಳಿದ್ದು, ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಮೈಸೂರಿನ ಕಡೆಗೆ ಹೊರಟಿದ್ದರು. ಮಧ್ಯರತ್ರಿ 1.10 ರ ಸಮಯದಲ್ಲಿ ನಾಗರಾಜು ಮೂತ್ರ ವಿಸರ್ಜನೆಗೆಂದು ಮಲ್ಲಯ್ಯನದೊಡ್ಡಿ ಬಳಿ ಇಳಿದಾಗ ಮುಖಗವಸು ಧರಿಸಿದ್ದ ಇಬ್ಬರು ಯುವಕರು ಏಕಾಏಕಿ ಇವರ ಮೇಲೆ ದಾಳಿ ಮಾಡಿದ್ದಾರೆ. ವರ ಬಳಿ ಇದ್ದ 25 ಸಾವಿರ ರೂ.ಗಳನ್ನೂ ಕಿತ್ತುಕೊಂಡಿದ್ದಾರೆ.
ನಂತರ ಚಿನ್ನದ ಸರ, ಉಂಗುರ ಕೊಡುವಂತೆ ತಾಕೀತು ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕುತ್ತಿಗೆ ಭಾಗಕ್ಕೆ ಡ್ರಾಗರ್ ಹಿಡಿದು ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ. ಹೆದರಿದ ನಾಗರಾಜು ಉಂಗುರ, ಸರ ನೀಡಿದ್ದಾರೆ. ಬಳಿಕ ಕಾರಿನೊಳಗೆ ಕುಳಿತಿದ್ದ ಪತ್ನಿ ಜಯಶ್ರೀ ಅವರ ಕಡೆಗೂ ತೆರಳಿದ ದರೋಡೆಕೋರರು ಮಾಂಗಲ್ಯ ಸರ, ಗುಂಡುಗಳನ್ನು ಕಿತ್ತುಕೊಂಡಿದ್ದಾರೆ.
ಜೀವ ಉಳಿದರೆ ಸಾಕು ಎಂದು ನಗ, ನಗದು ನೀಡಿದ್ದು, 100 ಗ್ರಾಂ ಚಿನ್ನದ ಆಭರಣ,25.000 ನಗದು ಸೇರಿ ಸುಮಾರು 6 ಲಕ್ಷ ರೂ. ದರೋಡೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಅಲ್ಲಿಂದ ಮಂಡ್ಯಕ್ಕೆ ಆಗಮಿಸಿದ ನಾಗರಾಜು ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಗ್ರಾಮಾಂತರ ಇನ್‌ಸ್ಪೆಕ್ಟರ್ ಹಾಗೂ ಪೊಲೀಸರ ತಂಡ ಘಟನೆ ನಡೆದ ಸ್ಥಳಕ್ಕೆ ತೆರಳಿದಾಗ ಅಲ್ಲಿ ಯಾರೂ ಇರಲಿಲ್ಲ. ಈ ಕುರಿತು ಸೋಮವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮುನ್ನೆಚ್ಚರಿಕೆ ಇರಲಿ:
ಹೆದ್ದಾರಿಯಲ್ಲಿ ಜನರಹಿತ ಪ್ರದೇಶದಲ್ಲಿ ಯಾರೂ ಮೂತ್ರ ವಿಸರ್ಜನೆಗೆಂದು ಇಳಿಯುವುದು ಬೇಡ. ಆದಷ್ಟು ಸುರಕ್ಷಿತ ಸ್ಥಳಗಳನ್ನು ನೋಡಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.