ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಪಾಲಿಕೆ, ಜಿಪಂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ
ಮೈಸೂರು: ವಿದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಆತಂಕ ಸೃಷ್ಟಿಸಿದ್ದು, ಸದ್ಯಕ್ಕೆ ಸಾರ್ವಜನಿಕರು ಯಾವುದೇ ಭಯಪಡುವ ಅಗತ್ಯವಿಲ್ಲ. ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಪಾಲಿಸುವ ಮೂಲಕ ರೋಗ ಹರಡುವಿಕೆ ತಡೆಯುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್ ಪರಿಸ್ಧಿತಿಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಕ್ರಮಗಳ ಕುರಿತಾದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-೧೯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರಸ್ತುತ ೪ ಪಾಸಿಟಿವ್ ಪ್ರಕರಣಗಳಿವೆ. ಮುಂಜಾಗ್ರತಾ ಕ್ರಮವಾಗಿ ಕೊರೊನಾ ತಡೆಗಟ್ಟಲು ಸಾರ್ವಜನಿಕರು ಮಾರ್ಗಸೂಚಿ ಪಾಲಿಸುವುದು ಅವಶ್ಯವಾಗಿದೆ ಎಂದರು.
ಪ್ರಸ್ತುತ ನಿತ್ಯ ೧೫೦ ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ. ನಾಳೆಯಿಂದ ೪೦೦ ಜನರಿಗೆ ಕೊರೊನಾ ಪರೀಕ್ಷೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡುವಂತೆ, ಔಷಧ ದಾಸ್ತಾನಿಡುವಂತೆ ಸೂಚಿಸಲಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ೫ ಐಸೋಲೇಷನ್ ಹಾಸಿಗೆ, ಜಿಲ್ಲಾಸ್ಪತ್ರೆಯಲ್ಲಿ ೫೦ ಐಸೋಲೇಷನ್ ಹಾಸಿಗೆ ಮೀಸಲಿಡುವಂತೆ ಆದೇಶಿಸಿಸಲಾಗಿದೆ ಎಂದರು. ಇದೇ ರೀತಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ೫೦ ಹಾಸಿಗೆಗಳನ್ನು ಮೀಸಲಿಡುವಂತೆ ತಿಳಿಸಲಾಗಿದೆ ಎಂದರು.
ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿ: ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲ್ಲ. ಆದರೆ, ಒಳಾಂಗಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರವಾಸಿ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಳ್ಳುವಂತೆ ಮನವಿ ಮಾಡಲಿದ್ದೇವೆ. ಪಬ್, ಬಾರ್, ರೆಸ್ಟೋರೆಂಟ್, ಸಿನಿಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಚೇರಿ, ಬಸ್, ರೈಲು, ವಿಮಾನ ಯಾನ ಸಂದರ್ಭಗಳಲ್ಲಿ ಮಾಸ್ಕ್ ಧರಿಸುವುದು ಅಗತ್ಯವಾಗಿರುತ್ತದೆ ಎಂದು ತಿಳಿಸಿದರು.
ಪರೀಕ್ಷೆ ಹೆಚ್ಚಳ: ತೀವ್ರ ನೆಗಡಿ, ಕೆಮ್ಮು, ಜ್ವರ (ಐಎಲ್‌ಐ/ಸಾರಿ) ಪ್ರಕರಣಗಳನ್ನು ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು. ಎಲ್ಲರಿಗೂ ಬೂಸ್ಟರ್ ಡೋಸ್ ಕಡ್ಡಾಯಗೊಳಿಸುವುದು, ಕೇಂದ್ರ ಸರ್ಕಾರದ ಜೊತೆ ನೇರ ಸಂಪರ್ಕದಲ್ಲಿದ್ದು ಲಸಿಕಾಕರಣ ಹೆಚ್ಚಿಸಲಾಗುವುದು. ಮುಂಚೂಣಿ ಕಾರ್ಯಕರ್ತರಾದ ಅಂಗನವಾಡಿ, ಆಶಾ, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗೆ ಆದ್ಯತೆ ಮೇರೆಗೆ ಬೂಸ್ಟರ್ ಡೋಸ್ ಹಾಕಲಾಗುವುದು ಎಂದು ಮಾಹಿತಿ ನೀಡಿದರು.
ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಶೇ.೨ರಷ್ಟು ಪ್ರಯಾಣಿಕರನ್ನು ರ್ಯಾಂಡಮ್ ಟೆಸ್ಟಿಂಗ್ ಮಾಡುವುದು. ವಿದೇಶದ ವಿಮಾನಗಳಿಂದ ಬರುವ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು ವಿಶೇಷವಾಗಿ ತಡೆಯಬೇಕು. ದನಗಳ ಜಾತ್ರೆಯನ್ನು ಜ.೧೦ರ ತನಕ ಮುಂದೂಡುವಂತೆ ತಿಳಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಬಿ.ಆರ್.ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್.ಪ್ರಸಾದ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕಿ ದಾಕ್ಷಾಯಿಣಿ, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಅಮರನಾಥ್, ಕೆ.ಆರ್.ಆಸ್ಪತ್ರೆ ಆರ್‌ಎಂಒ ಡಾ.ರಾಜೇಶ್‌ಕುಮಾರ್ ಉಪಸ್ಥಿತರಿದ್ದರು.
ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರುತ್ತಿರುವುದರಿಂದ ಮಾಸ್ಕ್ ಧರಿಸಿದರೆ ಸಾಕು. ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿ ನಿರ್ಬಂಧಿಸುವ ಅಗತ್ಯವಿಲ್ಲ. ವಿದೇಶದಿಂದ ಬಂದವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸುವ ಕಾರಣ ಯಾವುದೇ ಆತಂಕವಿಲ್ಲ.
-ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ.