- ಡಿ.ಉಮಾಪತಿ
ಮಾಹಿತಿ ಹಕ್ಕು ಕಾಯಿದೆಯು ಶರವೇಗದಲ್ಲಿ ಸಾವಿನತ್ತ ಧಾವಿಸಿದೆ’ ಎಂದು ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ದೇಶದ ಎಲ್ಲ ಮಾಹಿತಿ ಹಕ್ಕು ಆಯೋಗಗಳ ಖಾಲಿ ಸ್ಥಾನಗಳನ್ನು ಮುಂಬರುವ ಮಾರ್ಚ್ 31ರ ಒಳಗಾಗಿ ಭರ್ತಿ ಮಾಡುವಂತೆ ಗಡುವು ನೀಡಿದೆ.
ಸುಪ್ರೀಂ ಕೋರ್ಟಿನ ಕಳವಳದಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲ. ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಎಂಬುವು ಪ್ರಭುತ್ವಗಳ ಪಾಲಿಗೆ ಬಗಲ ಮುಳ್ಳುಗಳು. ಅವುಗಳ ಇಷ್ಟಾನಿಷ್ಟಕ್ಕೇ ಬಿಟ್ಟು ಬಿಟ್ಟರೆ ಹಾಸಿಗೆ ಹಿಡಿದು ತೀವ್ರ ಶುಶ್ರೂಷಕ ಘಟಕ (ಐ.ಸಿ.ಯು) ಸೇರಿರುವ ಮಾಹಿತಿ ಹಕ್ಕನ್ನು ನಾಳೆಯೇ ದಫನು ಮಾಡಿ ಹಿಡಿ ಮಣ್ಣು ಹಾಕಲು ತಯಾರಾಗಿವೆ.
ಅಂದಾಜು ಅಂಕಿ ಅಂಶಗಳ ಪ್ರಕಾರ ಈವರೆಗೆ ಆರ್.ಟಿ.ಐ. ಕಾಯಿದೆಯಡಿ ಮಾಹಿತಿಗಾಗಿ ಅರ್ಜಿ ಹಾಕುತ್ತಿರುವ ಭಾರತೀಯರ ಪ್ರಮಾಣ ಶೇ.೩ರಷ್ಟು ಮಾತ್ರ. ಇಷ್ಟು ಮಾತ್ರಕ್ಕೇ ವರ್ಷಕ್ಕೆ 40ರಿಂದ 50 ಲಕ್ಷ ಅರ್ಜಿಗಳು ಬರುತ್ತಿವೆ. ಇನ್ನು ಅರ್ಜಿ ಹಾಕುವವರ ಪ್ರಮಾಣ ಹೆಚ್ಚುತ್ತ ಹೋದಂತೆ ಯಾರ ಕಷ್ಟನಷ್ಟಗಳು ಹೆಚ್ಚುತ್ತ ಹೋಗಲಿವೆ, ಯಾರ್ಯಾರ ಕಳ್ಳ ಆದಾಯಗಳ ಬೆಟ್ಟಗಳು ಕರಗಲಿವೆ ಎಂಬುದನ್ನು ಒಮ್ಮೆ ಊಹಿಸಿ. ಆರ್.ಟಿ.ಐ. ಕತ್ತನ್ನು ಯಾರು ಹಿಸುಕುತ್ತಿದ್ದಾರೆ ಮತ್ತು ಏಕೆ ಎಂಬುದು ಅಂಗೈ ಗೆರೆಗಳಷ್ಟೇ ಸ್ಪಷ್ಟವಾಗುತ್ತದೆ.
ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ನಿಖಿಲ್ ಡೇ ಅವರ ಪ್ರಕಾರ ಆರ್.ಟಿ.ಐ. ಜಾರಿಗೆ ಬಂದ 17 ವರ್ಷಗಳಲ್ಲಿ ಈ ಕಾಯಿದೆಯನ್ನು ಬಳಸಿಕೊಂಡು ಮಾಹಿತಿ ಕೋರಿದ 100ಕ್ಕೂ ಹೆಚ್ಚು ಮಂದಿಯನ್ನು ಕೊಂದು ಹಾಕಲಾಗಿದೆ. ಮಾಹಿತಿ ಕೋರುವವರು ಜೀವ ಬೆದರಿಕೆಗಳು, ಕಿರುಕುಳಗಳು, ಬ್ಲ್ಯಾಕ್ ಮೇಲ್‌ಗಳು ಎಂಬ ಕಳಂಕ ಎದುರಿಸಬೇಕಾಗಿ ಬಂದಿದೆ. ಕ್ರೂರ ಮಾರಕ ದಾಳಿಗಳನ್ನೂ ಎದುರಿಸಿದ್ದಾರೆ.
ದುರಹಂಕಾರ ಭ್ರಷ್ಟಾಚಾರ, ಅದಕ್ಷತೆ, ಹಾಗೂ ಸಾರ್ವಜನಿಕಪರ ಮನೋಭಾವದ ಕೊರತೆಗಳು ಆಡಳಿತ ಮತ್ತು ಅಧಿಕಾರದ ಕೈ ಹಿಡಿದು ಜೊತೆ ಜೊತೆಗೆ ಹೆಜ್ಜೆ ಹಾಕುತ್ತವೆ. ಜನಸಾಮಾನ್ಯರನ್ನು ತುಳಿಯುತ್ತವೆ.
ಪಾರದರ್ಶಕತೆಯೊಂದೇ ಈ ವ್ಯಾಧಿಗಳಿಗೆ ಪರಿಣಾಮಕಾರಿ ಮದ್ದು. ಜಾರಿ ಯಾದ ಹೊಸತರಲ್ಲಿ ಈ ಕಾಯಿದೆಯು ಜನಸಾಮಾನ್ಯರ ಕೈಯಲ್ಲಿ ಭ್ರಷ್ಚಾ ಚಾರದ ವಿರುದ್ಧದ ಪರಿಣಾಮಕಾರಿ ಹತಾರು ಆಗಿತ್ತು. ಅವರನ್ನು ಸಬಲರನ್ನಾಗಿ ಸಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವೇ ಮುಂದಾಗಿ ಈ ಶಕ್ತಿಯನ್ನು ಗಣನೀಯವಾಗಿ ಕುಂದಿಸಿದೆ. ಜನತಂತ್ರ ವಿರೋಧಿ ನಡೆಯಿದು.
ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರ ಅರ್ಜಿಯನ್ನು ಕುರಿತು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯ ಪೀಠ ಸೋಮವಾರ ವಿಚಾರಣೆ ನಡೆಸಿ ಮಾಹಿತಿ ಹಕ್ಕು ಆಯೋಗಗಳ ಕುರಿತು ನೀಡಿರುವ ಆದೇಶ ಚಿಕಿತ್ಸಕವೂ ಸ್ವಾಗತಾರ್ಹವೂ ಆಗಿದೆ.
ಕೇಂದ್ರ ಮತ್ತು ರಾಜ್ಯಗಳ ಮಾಹಿತಿ ಹಕ್ಕು ಆಯೋಗಗಳ ಹಲವು ಹುದ್ದೆಗಳು ದೀರ್ಘ ಕಾಲದಿಂದ ಖಾಲಿ ಉಳಿದಿದ್ದು, ಸಾರ್ವಜನಿಕರು ಕೋರಿದ ಮಾಹಿತಿ ಗಳನ್ನು ಒದಗಿಸುವ ವ್ಯವಸ್ಥೆಯೇ ಕುಸಿದು ಬಿದ್ದಿದೆಯೆಂದು ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ.
ಎಲ್ಲ ರಾಜ್ಯಗಳ ಮಾಹಿತಿ ಹಕ್ಕು ಆಯೋಗಗಳ ಒಟ್ಟು ಮಂಜೂರು ಸ್ಥಾನ ಗಳು ಮತ್ತು ಖಾಲಿ ಉಳಿದಿರುವ ಸ್ಥಾನಗಳು ಹಾಗೂ ಮುಂದಿನ ಮಾರ್ಚ್ ವರೆಗೆ ಖಾಲಿಯಾಗಲಿರುವ ಸ್ಥಾನಗಳ ಜೊತೆಗೆ ಈ ಆಯೋಗಗಳ ಮುಂದೆ ಬಾಕಿ ಬಿದ್ದಿರುವ ದೂರುಗಳು ಮತ್ತು ಅಪೀಲುಗಳ ಸಂಖ್ಯೆಯ ಮಾಹಿತಿಯನ್ನು ಕಲೆ ಹಾಕುವಂತೆಯೂ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಎಲ್ಲ ಮಾಹಿತಿಯನ್ನು ಒಳಗೊಂಡ ವರದಿಯೊಂದನ್ನು ಮೂರು ವಾರಗಳ ಒಳಗಾಗಿ ತನಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಅಽಸೂಚನೆ ಹೊರಡಿಸಿ ನೇಮಕದ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ. ರಾಜ್ಯಗಳು ಖಾಲಿ ಸ್ಥಾನಗಳನ್ನು ತುಂಬದೆ ಆರ್.ಟಿ.ಐ.ಕಾಯಿದೆಯನ್ನು ನಿಷ್ಪ್ರಯೋಜಕ ಆಗಿಸಿವೆ ಎಂದು ನ್ಯಾಯಾಲಯ ಅಸಮಾಧಾನ ಪ್ರಕಟಿಸಿದೆ. ಕೇಂದ್ರೀಯ ಮಾಹಿತಿ ಆಯೋಗವೂ ಈ ದುಸ್ಥಿತಿಯಿಂದ ಹೊರತಾಗಿಲ್ಲ. ಈ ಆಯೋಗದ ಹನ್ನೊಂದು ಆಯುಕ್ತ ಸ್ಥಾನಗಳ ಪೈಕಿ ಏಳು ಖಾಲಿ ಬಿದ್ದಿವೆ. ಮುಖ್ಯ ಆಯುಕ್ತರು ಇದೇ ನವೆಂಬರ್ ತಿಂಗಳಿನಲ್ಲಿ ನಿವೃತ್ತರಾಗಲಿದ್ದಾರೆ. ಕರ್ನಾಟಕದ ಮಾಹಿತಿ ಆಯೋಗ ಕೇವಲ ಐವರು ಆಯುಕ್ತರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆರು ಆಯುಕ್ತ ಹುದ್ದೆಗಳು ಖಾಲಿ ಬಿದ್ದಿವೆ. 40 ಸಾವಿರಕ್ಕೂ ಹೆಚ್ಚು ದೂರುಗಳು- ಅಪೀಲುಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇವುಗಳ ವಿಲೇವಾರಿಗೆ 23 ತಿಂಗಳುಗಳೇ ಹಿಡಿಯಲಿವೆಯಂತೆ. ಮಹಾರಾಷ್ಟ್ರ ರಾಜ್ಯ ಮಾಹಿತಿ ಆಯೋಗದ ಮುಂದೆ 1,15,000 ದೂರುಗಳು ಮತ್ತು ಅಪೀಲುಗಳಿವೆ. ಆದರೆ ಈ ಆಯೋಗಕ್ಕೆ ಮುಖ್ಯಸ್ಥರೇ ಇಲ್ಲ. ನಾಲ್ವರು ಆಯುಕ್ತರು ಮಾತ್ರವೇ ಇದ್ದಾರೆ. ಜಾರ್ಖಂಡ್ ಮಾಹಿತಿ ಆಯೋಗ 2020ರ ಮೇ ತಿಂಗಳಿನಿಂದ ಸಂಪೂರ್ಣ ನಿಷ್ಕ್ರಿಯವಾಗಿದೆ. ಯಾವುದೇ ದೂರುಗಳು ಅಥವಾ ಅಪೀಲುಗಳನ್ನು ಸ್ವೀಕರಿಸುತ್ತಿಲ್ಲ ಮತ್ತು ವಿಲೇವಾರಿಯೂ ಆಗುತ್ತಿಲ್ಲ. ತೆಲಂಗಾಣ ಮತ್ತು ತ್ರಿಪುರಾ ಮಾಹಿತಿ ಆಯೋಗ ಗಳ ಎಲ್ಲ ಆಯುಕ್ತರ ಸ್ಥಾನಗಳು 2021ರ ಫೆಬ್ರವರಿಯಿಂದಲೇ ಖಾಲಿ ಬಿದ್ದಿವೆ ಎಂದು ಅರ್ಜಿದಾರೆ ಅಂಜಲಿ ಪರವಾಗಿ ನ್ಯಾಯವಾದಿ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು.
ಸಾರ್ವಜನಿಕ ಪ್ರಾಧಿಕಾರಗಳ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲೆಂದು 2005ರ ಜೂನ್ 15ರಂದು ಈ ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು ಕೇಂದ್ರ ಸರ್ಕಾರದಲ್ಲಿ ಮಾತ್ರವಲ್ಲದೆ, ಪ್ರತಿಯೊಂದು ರಾಜ್ಯದಲ್ಲಿಯೂ ಮಾಹಿತಿ ಹಕ್ಕು ಆಯೋಗಗಳನ್ನು ರಚಿಸ ಲಾಯಿತು. ಈ ಕಾಯಿದೆಯ ಪ್ರಕಾರ ಸಾರ್ವಜನಿಕ ಪ್ರಾಧಿಕಾರಗಳು ನಾಗರಿಕರು ಬಯಸಿದ ಮಾಹಿತಿಗಳನ್ನು ನಿಗದಿತ ಅವಧಿಯೊಳಗಾಗಿ ಒದಗಿಸಬೇಕಿದೆ.
ಇತ್ತೀಚೆಗಷ್ಟೇ 18 ವರ್ಷ ತುಂಬಿದ ಮಾಹಿತಿ ಹಕ್ಕು ಕಾಯಿದೆಯು ಇತ್ತೀಚಿನ ವರ್ಷಗಳಲ್ಲಿ ಅನಿಶ್ಚಿತ ಭವಿಷ್ಯವನ್ನು ಎದುರಿಸಿದೆ. ಕಾಯಿದೆಯನ್ನು ಮತ್ತು ಅದರ ಹಿಂದಿರುವ ಆಶಯವನ್ನು ಸತತವಾಗಿ ವ್ಯವಸ್ಥಿತವಾಗಿ ದುರ್ಬಲಗೊಳಿ ಸಲಾಗುತ್ತಿದೆ. ಮಾಹಿತಿ ಆಯುಕ್ತರ ಹುದ್ದೆಗಳ ಸ್ಥಾನಮಾನಗಳನ್ನು ಕೆಳದರ್ಜೆಗೆ ಇಳಿಸಲು ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಸತರ್ಕ ನಾಗರಿಕ ಸಂಘಟನೆ ಎಂಬ ಸ್ವಯಂಸೇವಾ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಮಾಹಿತಿ ಹಕ್ಕು ಆಯೋಗಗಳು ದೇಶದ ನಾನಾ ರಾಜ್ಯಗಳಲ್ಲಿ ಬಹುತೇಕ ನಿಷ್ಕ್ರಿಯವಾಗಿ ಹೋಗಿವೆ. ಈ ಕಾಯಿದೆಯ ಅಡಿಯಲ್ಲಿ ದೂರುಗಳು ಮತ್ತು ಮಾಹಿತಿ ಕೋರಿದ ಅಹವಾಲುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ನಡೆದಿದ್ದು ದಾಖ ಲಾತಿ ಸಂಖ್ಯೆಯನ್ನು ತಲುಪಿವೆ. ಹೀಗೆ ಕುಂಟುತ್ತ ತೆವಳುತ್ತ ಸಾಗಿರುವ ಮಾಹಿತಿ ಹಕ್ಕು ಆಯೋಗಗಳ ಮುಂದೆ 3.21 ಲಕ್ಷ ಅಪೀಲುಗಳು ಬಾಕಿ ಉಳಿದಿವೆ. ಹಾಲಿ ಮಂದಗತಿಯನ್ನು ಪರಿಗಣಿಸಿದರೆ ಪಶ್ಚಿಮ ಬಂಗಾಳದ ಮಾಹಿತಿ ಹಕ್ಕು ಆಯೋಗದ ಮುಂದೆ ಮೂರು ತಿಂಗಳ ಹಿಂದೆ ಸಲ್ಲಿಸಿದ ಅರ್ಜಿಯ ವಿಲೇವಾರಿ ಸರದಿ ಬರಲು 24 ವರ್ಷಗಳೇ ಬೇಕೆಂದು ಲೆಕ್ಕ ಹಾಕಲಾಗಿದೆ.
2023ರ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯಿದೆ ಜಾರಿಯ ಪರಿಣಾಮವಾಗಿ ಸಾರ್ವಜನಿಕ ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಯ ವ್ಯಕ್ತಿಗತ ಮಾಹಿತಿಯನ್ನು ಕೋರುವುದೂ ಅಸಾಧ್ಯವಾಗಿ ಪರಿಣಮಿಸಿದೆ.
ಸರ್ಕಾರವು ಆಯೋಗಗಳ ಕಾರ್ಯವ್ಯಾಪ್ತಿಯನ್ನು ಕುಗ್ಗಿಸಿರುವುದೇ ಅಲ್ಲದೆ, ಈ ಕಾಯಿದೆಯ ಉದ್ದೇಶವನ್ನೇ ವಿಫಲಗೊಳಿಸಲು ಇತರೆ ಶಾಸನಗಳನ್ನು ಅದರ ವಿರುದ್ಧ ಹೂಡಿದೆ. ಈ ಕಾಯಿದೆಯ ವಿರುದ್ಧ ಸರ್ಕಾರ ಹೆಚ್ಚು ಹೆಚ್ಚು ನೇತ್ಯಾತ್ಮಕ ಧೋರಣೆ ತಳೆದು, ಹೆಜ್ಜೆ ಹೆಜ್ಜೆಗೆ ನಿರ್ಬಂಧಗಳನ್ನು ಹೇರುತ್ತಿದೆ. ಮಾಹಿತಿ ನೀಡದಿರುವ ಮತ್ತು ತಪ್ಪು ಮಾಹಿತಿ ಒದಗಿಸಿರುವ ಅಧಿಕಾರಿಗಳಿಗೆ ದಂಡಶುಲ್ಕ ವಿಽಸದೆ ಇರುವುದು ನಿರ್ಲಕ್ಷ್ಯದ ಪ್ರವೃತ್ತಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಸರ್ಕಾರದ ಈ ದಮನವನ್ನು ಹಿಮ್ಮೆಟ್ಟಿಸಲು ನ್ಯಾಯಾಲಯದ ಹಸ್ತಕ್ಷೇಪವೊಂದೇ ಅಂತಿಮ ಆಶಾಕಿರಣ