ಮೈಸೂರು : ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವುದಾಗಿ ಬಂದ ಮೆಸೇಜ್ ನಂಬಿದ ವೃದ್ಧರೊಬ್ಬರು 21 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಗೋಕುಲಂನ ವಿವೇಕಾನಂದ ರಸ್ತೆಯ ಗೌಸ್(76) ಎಂಬುವರೇ ಹಣ ಕಳೆದುಕೊಂಡವರು. ಎರಡು ದಿನಗಳ ಹಿಂದೆ ಕ್ರೆಡಿಟ್ ಕಾರ್ಡ್‌ನ ಲಿಮಿಟ್ ಹೆಚ್ಚಿಸುವುದಾಗಿ ಗೌಸ್ ಅವರ ಮೊಬೈಲ್‌ಗೆ ಎಸ್‌ಎಂಎಸ್ ಬಂದಿದೆ.
ಇದನ್ನು ನಂಬಿದ ಗೌಸ್ ಅವರು ತಮ್ಮ ಇಮೇಲ್, ಕ್ರೆಡಿಟ್ ಕಾರ್ಡ್ ಸಂಖ್ಯೆ, ಜನ್ಮದಿನಾಂಕ ವಿವರಗಳನ್ನ ಒದಗಿಸಿದ್ದಾರೆ. ಅದೇ ಸಮಯದಲ್ಲಿ ದುಷ್ಕರ್ಮಿಗಳು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ನಿಂದ ೧,೦೦,೪೮೫ ರೂ. ಡ್ರಾ ಮಾಡಿದ್ದಾರೆ.
ಅವರು ತಕ್ಷಣವೇ ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ. ಆದರೆ ಕಿಲಾಡಿಗಳು ಐಡಿಎಫ್‌ಸಿ ಬ್ಯಾಂಕ್ ಖಾತೆಯಲ್ಲಿದ್ದ ೨೦ ಲಕ್ಷ ರೂ. ಹಣವನ್ನೂ ಸಹ ಡ್ರಾ ಮಾಡಿದ್ದಾರೆ. ವಂಚನೆಗೆ ಒಳಗಾದ ಗೌಸ್ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





