ಸಾಲಿಗ್ರಾಮ : ಮನೆ ಮತ್ತು ಜಮೀನನ್ನು ನಮ್ಮ ಹೆಸರಿಗೆ ಮಾಡಿಕೊಡಿ ಎಂದು ಮಾವನೊಂದಿಗೆ ಜಗಳ ತೆಗೆದು, ಸೊಸೆಯೇ ಥಳಿಸಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಕೆಡಗ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಕೆಡಗ ಗ್ರಾಮದ ನಾಗರಾಜು (೭೦) ಕೊಲೆಯಾದವರು.
ಮೈಸೂರು ನಗರದ ಸಿಎಆರ್‌ನಲ್ಲಿ ಪೊಲೀಸ್ ಸಿಬ್ಬಂದಿಯಾಗಿರುವ ಪಂಚಾಕ್ಷರಿ ಅವರ ಪತ್ನಿ ಡಿಲಾಕ್ಷಿ ತಮ್ಮ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸವಾಗಿದ್ದು ಆಗಾಗ್ಗೆ ಊರಿಗೆ ಬಂದು ಹೋಗುತ್ತಾ ಇದ್ದರು. ೨೦ ದಿನಗಳ ಹಿಂದೆ ಮನೆ ಕಟ್ಟಿಸಲು ಕೆಡಗ ಗ್ರಾಮಕ್ಕೆ ಆಗಮಿಸಿದ್ದ ಅವರು ಗ್ರಾಮದಲ್ಲಿ ನೆಲೆಸಿದ್ದರು. ಪಂಚಾಕ್ಷರಿ ಮೈಸೂರಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದರು.
ಈ ಸಂದರ್ಭದಲ್ಲಿ ಸೊಸೆ ಡಿಲಾಕ್ಷಿ ಅವರು ತಮ್ಮ ಮಾವ ನಾಗರಾಜು, ಅತ್ತೆ ಗೌರಮ್ಮ ಅವರುಗಳಿಗೆ ‘ನಿಮಗೆ ವಯಸ್ಸಾಗಿದೆ. ಮನೆ ಮತ್ತು ಜಮೀನು ಎಲ್ಲವನ್ನೂ ನಮ್ಮ ಹೆಸರಿಗೆ ಬರೆದುಕೊಟ್ಟು, ನೀವು ಎಲ್ಲಿಯಾದರೂ ಹೋಗಿ ಸಾಯಿರಿ’ ಎಂದು ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ.
ಆ.೨೩ರ ಶನಿವಾರ ಬೆಳಿಗ್ಗೆ ೮ ಗಂಟೆ ಸುಮಾರಿನಲ್ಲಿ ಮಾವ ನಾಗರಾಜು ಜಮೀನಿಗೆ ಹೋಗಿದ್ದರು. ಸುಮಾರು ೧೧ ಗಂಟೆಯ ಸಮಯದಲ್ಲಿ ಕೆಲವರು ಮನೆಗೆ ಬಂದು ನಿಮ್ಮ ಹೊಸ ಮನೆಯ ಬಳಿ ನಿಮ್ಮ ಯಜಮಾನರು ನರಳಾಡುತ್ತ ಬಿದ್ದಿದ್ದಾರೆ ಎಂದು ಗೌರಮ್ಮ ಅವರಿಗೆ ತಿಳಿಸಿದ್ದಾರೆ. ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ನಾಗರಾಜು ಅವರ ಎರಡೂ ಕಾಲಿನ ಬಳಿ ಹಾಗೂ ಎಡ ಕಣ್ಣಿನ ಬಳಿ ರಕ್ತ ಬರುತ್ತಿತ್ತು. ಅವರು ತೀವ್ರವಾಗಿ ನರಳುತ್ತಿದ್ದರು. ಏನಾಯಿತು ಎಂದು ವಿಚಾರಿಸಿದಾಗ, ಸೊಸೆ ಡಿಲಾಕ್ಷಿಯು ಮನೆ ಮತ್ತು ಜಮೀನನ್ನು ನಮ್ಮ ಹೆಸರಿಗೆ ಬರೆಯಿರಿ ಎಂದು ಒತ್ತಾಯಿಸಿ ನಿಂದಿಸಿದಳು. ಅದನ್ನು ಪ್ರಶ್ನಿಸಿದ್ದಕ್ಕೆ ಕೈಯಿಂದ ಹೊಡೆದು ಕೆಳಕ್ಕೆ ಕೆಡವಿ, ಕಾಲಿನಿಂದ ಒದ್ದು, ಮರದ ರಿಪೀಸ್ ಪಟ್ಟಿಯಿಂದ ಮೈ, ಕೈಗೆ ಹಾಗೂ ಮಚ್ಚಿನಿಂದ ನನ್ನ ಕಾಲುಗಳಿಗೆ ಹೊಡೆದಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಗ ಪಂಚಾಕ್ಷರಿ ಸ್ಥಳದಲ್ಲಿದ್ದರೂ ಜಗಳ ನಿಲ್ಲಿಸದೆ ನೋಡುತ್ತಾ ನಿಂತಿದ್ದನು. ನನ್ನ ಗಂಡನಿಗೆ ಏಕೆ ಹೀಗೆ ಮಾಡಿದ್ದೀಯಾ ಎಂದು ಕೇಳಿದಾಗ ಕೊಲೆ ಬೆದರಿಕೆ ಹಾಕಿದಳು. ನಂತರ ಊರಿನೊಳಗೆ ಹೋಗಿ ಗ್ರಾಮಸ್ಥರನ್ನು ಮತ್ತು ಸಂಬಂಧಿಕರನ್ನು ಕರೆದುಕೊಂಡು ಬಂದು ಪತಿ ನಾಗರಾಜು ಅವರನ್ನು ಆಸ್ಪತ್ರೆಗೆ ಸೇರಿಸೋಣ ಎಂದು ಹೋದಾಗ ಯಾರೂ ಸಿಗಲಿಲ್ಲ. ಮತ್ತೆ ಸ್ಥಳಕ್ಕೆ ವಾಪಸ್ ಬಂದು ನೋಡಿದಾಗ ನಮ್ಮ ಪತಿ ನಾಗರಾಜು ಸತ್ತು ಹೋಗಿದ್ದರು ಎಂದು ಗೌರಮ್ಮ ತಿಳಿಸಿದ್ದಾರೆ.
ಗೌರಮ್ಮ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡಿಲಾಕ್ಷಿ ಮತ್ತು ಪಂಚಾಕ್ಷರಿ ಅವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್, ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ರಘು, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಶಶಿಕುಮಾರ್ ಹಾಗೂ ಶಿವಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





