ಬೆಂಗಳೂರು : ಇಲ್ಲಿನ ಹೊರವಲಯದಲ್ಲಿ ರಾಬರಿ ನಡೆಸುತ್ತಿದ್ದ ಅಪ್ರಾಪ್ತರ ತಂಡದ ಹೆಡೆಮುರಿಕಟ್ಟುವಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರು ಜನ ಅಪ್ರಾಪ್ತರು ಸೇರಿ ಅಪರಾಧ ಹಿನ್ನೆಲೆ ಇರೋ ಓರ್ವನನ್ನು ಒಳಗೊಂಡಿದ್ದ ತಂಡವನ್ನು ಬಂಧಿಸಲಾಗಿದೆ. ಕೇವಲ ಮೂರು ದಿನಗಳಲ್ಲಿ ೩೭ ಕಡೆ ಈ ತಂಡ ದರೋಡೆ ನಡೆಸಿತ್ತು. ಮಾದನಾಯಕನಹಳ್ಳಿ, ದೊಡ್ಡಬಳ್ಳಾಪುರ, ಸೂರ್ಯನಗರ, ನೆಲಮಂಗಲ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ತಂಡ ಕೈ ಚಳಕ ತೋರಿಸಿ, ಭಾರಿ ಪ್ರಮಾಣದಲ್ಲಿ ಕಳ್ಳತನ ನಡೆಸಿತ್ತು.
ಇದನ್ನೂ ಓದಿ:-ಬೆಂಗಳೂರು | 7.80 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ ; ವಿದೇಶಿ ಪ್ರಜೆಗಳ ಬಂಧನ
ರಾತ್ರಿ ವೇಳೆ ಮೂರು ಬೈಕ್‌ಗಳಲ್ಲಿ ಸುತ್ತುತ್ತಿದ್ದ ಈ ಖತರ್ನಾಕ್ ತಂಡ, ಕಾರುಗಳನ್ನು ಹಾಗೂ ಲಾರಿಗಳನ್ನು ಅಡ್ಡಹಾಕಿ ಸುಲಿಗೆ ಮಾಡುತ್ತಿತ್ತು. ಚಾಕು ತೋರಿಸಿ ಮೊಬೈಲ್, ಹಣ ಕಸಿದುಕೊಂಡು ಆರೋಪಿಗಳು ಪರಾರಿ ಆಗುತ್ತಿದ್ದರು. ಹಣ ಕೊಡಲು ನಿರಾಕರಿಸಿದರೆ ಚಾಕು ಹಾಕಿ ಓಡಿ ಹೋಗುತ್ತಿದ್ದರು. ಘಟನೆ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣಗಳ ಹಿಂದೆ ಒಂದು ದೊಡ್ಡ ಗ್ಯಾಂಗ್ ಇರುವುದು ಗೊತ್ತಾಗಿತ್ತು. ಆರೋಪಿಗಳ ಸೆರೆಗೆ ವಿಶೇಷ ತಂಡ ರಚಿಸಿದ್ದ ಪೊಲೀಸರು ತಂಡದ ಸದಸ್ಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ೯ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.





