ಡಿ.ವಿ.ರಾಜಶೇಖರ
ಕೊನೆಗೂ ಪ್ಯಾಲೆಸ್ಟೇನ್ ಜನರ ಗಾಜಾ ಪ್ರದೇಶದಲ್ಲಿ ಕದನ ವಿರಾಮ ಘೋಷಿತವಾಗಿದೆ. ಈ ಸಂಬಂಧವಾಗಿ ಇಸ್ರೇಲ್ ಮತ್ತು ಹಮಾಸ್ ನಾಯಕರ ನಡುವೆ ಒಂದು ಒಪ್ಪಂದವಾಗಿದೆ. ಕತಾರ್, ಈಜಿಪ್ಟ್ ಮತ್ತು ಅಮೆರಿಕ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಒಪ್ಪಂದದ ಪ್ರಕಾರ ಕದನ ವಿರಾಮ ಭಾನುವಾರದಿಂದ ಜಾರಿಗೆ ಬರಲಿದೆ. ಅಂದಿಗೆ ಯುದ್ಧ ಆರಂಭವಾಗಿ ಸರಿಯಾಗಿ ೧೫ ತಿಂಗಳು ಆಗಲಿದೆ. ವಿಚಿತ್ರ ಎಂದರೆ ಅಮೆರಿಕದಲ್ಲಿ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ೨೦ ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಅಧ್ಯಕ್ಷ ಜೋ ಬೈಡನ್ ಅಧಿಕಾರದ ಅವಧಿ ಮುಗಿದ ದಿನ ಗಾಜಾ ಕದನ ವಿರಾಮವೂ ಜಾರಿಗೆ ಬರಲಿದೆ. ಬೈಡನ್ ಅಧೀಕಾರದಲ್ಲಿದ್ದಾಗ ಆರಂಭವಾದ ಯುದ್ಧ ಅವರ ನಿರ್ಗಮನದೊಂದಿಗೆ ಅಂತ್ಯವೂ ಆಗಲಿದೆ. ಕದನ ವಿರಾಮ ಒಪ್ಪಂದವನ್ನು ಜಾರಿ ಮಾಡುವ ಜವಾಬ್ದಾರಿ ಮುಂದಿನ ಅಧ್ಯಕ್ಷ ಟ್ರಂಪ್ ಅವರದ್ದಾಗಲಿದೆ.
ಕದನ ವಿರಾಮ ನಿರ್ಧಾರ ಘೋಷಣೆಯಾದ ನಂತರವೂ ಇಸ್ರೇಲ್ ಸೇನೆ ಗಾಜಾ ಪ್ರದೇಶದ ಮೇಲಿನ ತನ್ನ ದಾಳಿಯನ್ನು ನಿಲ್ಲಿಸಿಲ್ಲ. ಈ ದಾಳಿಗಳಲ್ಲಿ ೯೪ ಮಂದಿ ಪ್ಯಾಲೆಸ್ಟೇನ್ ಜನರು ಸತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಮುಂಬರುವ ದಿನಗಳಲ್ಲಿ ಏನಾಗಬಹುದು ಎಂಬುದನ್ನು ಸೂಚಿಸುತ್ತದೆ. ಲೆಬನಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ವಿರಾಮ ಒಪ್ಪಂದವಾದ ನಂತರವೂ ಇಸ್ರೇಲ್ ಸುಮ್ಮನಿರಲಿಲ್ಲ. ಹೆಜಬುಲ್ಲಾ ಉಗ್ರವಾದಿಗಳನ್ನು ಕೊಲ್ಲಲು ಮಿಲಿಟರಿ ದಾಳಿ ನಡೆಸುತ್ತ ಹೋಯಿತು. ಅಲ್ಲಿನ ಸರ್ಕಾರ ಮತ್ತು ಜನರು ನಿಸ್ಸಹಾಯಕರಾಗಿ ಇಸ್ರೇಲ್ ದಾಳಿಗಳಿಂದ ಬಲಿಯಾಗುತ್ತಿದ್ದಾರೆ. ಹೆಜಬುಲ್ಲಾ ಉಗ್ರವಾದಿಗಳನ್ನು ಮುಗಿಸುವ ಇಸ್ರೇಲ್ ಉದ್ದೇಶದಲ್ಲಿ ಬದಲಾವಣೆ ಆಗಿಲ್ಲ. ಪ್ಯಾಲೆಸ್ಟೇನ್ ಜನರ ಹಮಾಸ್ ಉಗ್ರರ ವಿಚಾರದಲ್ಲಿಯೂ ಇಸ್ರೇಲ್ ಇದೇ ಧೋರಣೆ ಮುಂದುವರಿಸುವಂತೆ ಕಾಣುತ್ತದೆ. ಕದನ ವಿರಾಮ ಒಪ್ಪಂದದ ಬಗ್ಗೆಯೇ ಇಸ್ರೇಲ್ ಪ್ರಧಾನಿ ನೆತಾನ್ಯಹು ಸಂಪುಟದಲ್ಲಿ ಭಿನ್ನಮತ ಎದ್ದಿದೆ. ಅವರ ಬೆಂಬಲಿಗ ಉಗ್ರಬಲಪಂಥೀಯರು ಒಪ್ಪಂದಕ್ಕೆ ವಿರುದ್ಧವಾಗಿದ್ದಾರೆ. ಬೆಂಬಲ ವಾಪಸ್ ಪಡೆದು ಸರ್ಕಾರ ಬೀಳಿಸುವ ಮಾತನ್ನು ಆಡುತ್ತಿದ್ದಾರೆ. ನೆತಾನ್ಯಹು ಈ ಭಿನ್ನಮತವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕು.
ಗಾಜಾ ಯುದ್ಧ ಒಂದು ರೀತಿಯಲ್ಲಿ ಅರಬ್ ಪ್ರದೇಶದ ರಾಜಕೀಯ ಮತ್ತು ಅಧಿಕಾರದ ಸ್ವರೂಪವನ್ನೇ ಬದಲಾಯಿಸಿದಂತೆ ಕಾಣುತ್ತದೆ. ಗಾಜಾ ಯುದ್ಧದಲ್ಲಿ ಇಸ್ರೇಲ್ ಮೇಲುಗೈ ಸಾಽಸಿದ ಪರಿಣಾಮವಾಗಿ ಇರಾನ್ ಬಲಕಳೆದುಕೊಂಡಿದೆ. ಇಸ್ರೇಲ್ ವಿರುದ್ಧ ಇರಾನ್ ನಡೆಸುತ್ತಿದ್ದ ಪರೋಕ್ಷ ಯುದ್ಧ ಸದ್ಯಕ್ಕೆ ಅಂತ್ಯಗೊಂಡಂತಾಗಿದೆ. ಇರಾನ್ ಬೆಂಬಲದ ಹೆಜಬುಲ್ಲಾ, ಹಮಾಸ್, ಯಮನ್‌ನ ಹೌತಿಗಳ ಸಂಘಟನೆಗಳೆಲ್ಲಾ ನೆಲಕಚ್ಚಿವೆ. ಈ ಸಂಘಟನೆಗಳ ಮುಖ್ಯ ನಾಯಕರನ್ನೆಲ್ಲಾ ಇಸ್ರೇಲ್ ಕೊಂದಿದೆ. ಇರಾನ್ ಮೇಲೆ ಕೂಡ ಇಸ್ರೇಲ್ ಮಿಲಿಟರಿ ದಾಳಿ ನಡೆಸಿದೆ. ತನ್ನ ಬೆಂಬಲದ ಸಂಘಟನೆಗಳ ನಾಯಕರು ಹತರಾದರೂ ಇರಾನ್ ಏನೂ ಮಾಡಲಾಗದಂಥ ಸ್ಥಿತಿಗೆ ತಲುಪಿದ್ದು ಗಾಜಾ ಯುದ್ಧದ ದೊಡ್ಡ ಪರಿಣಾಮ. ಇಂಥದ್ದೇ ಇನ್ನೊಂದು ಬೆಳವಣಿಗೆ ಸಿರಿಯಾದಲ್ಲಿ ಇರಾನ್ ಬೆಂಬಲದ ಅಧ್ಯಕ್ಷ ಅಸ್ಸಾದ್ ಪದಚ್ಯುತಿ. ಅಸ್ಸಾದ್ ವಿರುದ್ಧ ಹೋರಾಡುತ್ತಿದ್ದ ಸುನ್ನಿ ಉಗ್ರವಾದಿಗಳು ಅಧಿಕಾರಕ್ಕೇರಿದ್ದು ಅರಬ್ ವಲಯದಲ್ಲಿ ಆದ ಮಹತ್ವದ ಬೆಳವಣಿಗೆ. ಹಲವಾರು ದಶಕಗಳಿಂದ ಮಧ್ಯಪ್ರಾಚ್ಯ ಪರೋಕ್ಷ ಯುದ್ಧದ ನೆಲೆಯಾಗಿದ್ದು ಇದೀಗ ಇಸ್ರೇಲ್ ಆ ಯುದ್ಧಕ್ಕೆ ಕಾರಣರಾಗಿರುವವರನ್ನೆಲ್ಲಾ ಮಟ್ಟಹಾಕಿದೆ.
ಆದರೆ ಸಂಪೂರ್ಣವಾಗಿ ಉಗ್ರ ಸಂಘಟನೆಗಳನ್ನು ನಾಶ ಮಾಡಲು ಸಾಧ್ಯವಾಗಿಲ್ಲ. ಒತ್ತೆಯಾಳುಗಳನ್ನು ಪತ್ತೆ ಮಾಡಲು ಸಾಧ್ಯವಾಗದಿದ್ದುದು ಒಂದು ರೀತಿಯಲ್ಲಿ ಇಸ್ರೇಲ್‌ಗೆ ಮುಖಭಂಗವೇ ಆಗಿದೆ. ಹಮಾಸ್ ಮತ್ತು ಹೆಜಬುಲ್ಲಾ ಉಗ್ರರು ಇಸ್ರೇಲ್ ದಾಳಿಗಳಲ್ಲಿ ಸತ್ತರೇ ಹೊರತು ಶರಣಾಗಲಿಲ್ಲ. ಇದೇನೇ ಇದ್ದರೂ ಈ ವಲಯದ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯಾಗಿ ಇಸ್ರೇಲ್ ಹೊರಹೊಮ್ಮಿದೆ. ಇದರಿಂದ ಆ ಪ್ರದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಲು ಸಾಧ್ಯವಿಲ್ಲವಾದರೂ ಸದ್ಯಕ್ಕೆ ಯುದ್ಧಗಳಿಗೆ ವಿರಾಮ ಸಿಗಲಿದೆ. ಉಗ್ರವಾದಿ ಸಂಘಟನೆಗಳು ಒಂದು ಸಿದ್ಧಾಂತದ ಮೇಲೆ ರೂಪಿತ ವಾಗಿ ರುವುದರಿಂದ ಅವುಗಳ ಆಶಯಗಳನ್ನು ಸಂಪೂರ್ಣವಾಗಿ ಸಾಯಿಸಲು ಸಾಧ್ಯವಿಲ್ಲ. ಮತ್ತೆ ಈ ಸಂಘಟನೆಗಳು ತಲೆಎತ್ತುವ ಸಾಧ್ಯತೆ ಇದ್ದೇ ಇದೆ. ಇದಕ್ಕೆ ಕಾರಣ ಪ್ಯಾಲೆಸ್ಟೇನ್ ಜನರ ಮೂಲ ಬೇಡಿಕೆ ಈಡೇರದಿರುವುದೇ ಆಗಿದೆ. ಸ್ವತಂತ್ರ ಪ್ಯಾಲೆಸ್ಟೇನ್ ದೇಶ ರಚನೆಗಾಗಿ ಜನರು ಸುಮಾರು ಏಳು ದಶಕಗಳಿಂದ ಹೋರಾಡುತ್ತ ಬಂದಿದ್ದಾರೆ. ಹಿಂದಿನ ಪ್ಯಾಲೆಸ್ಟೇನ್ ಪ್ರದೇಶವನ್ನು ಇಸ್ರೇಲ್ ಅತಿಕ್ರಮಿಸುತ್ತಲೇ ಇದೆ. ಇದರ ವಿರುದ್ಧವೂ ಪ್ಯಾಲೆಸ್ಟೇನ್ ಜನರು ಹೋರಾಡುತ್ತ ಬಂದಿದ್ದಾರೆ. ಆದರೆ ಇಸ್ರೇಲ್ ಅತಿಕ್ರಮಣ ನಿಂತಿಲ್ಲ. ಈ ಸಮಸ್ಯೆ ಗಳು ಪರಿಹಾರವಾಗಿ ಪ್ರತ್ಯೇಕ ಪ್ಯಾಲೆಸ್ಟೇನ್ ದೇಶ ರಚನೆಯಾಗುವವರೆಗೆ ಸಂಘರ್ಷ ನಿಲ್ಲುವ ಸಾಧ್ಯತೆ ಇಲ್ಲ. ಪ್ಯಾಲೆಸ್ಟೇನ್ ಉಗ್ರರು ಆ ಪ್ರದೇಶದಲ್ಲಿ ಇಸ್ರೇಲ್ ಅಸ್ತಿತ್ವವನ್ನೇ ಒಪ್ಪುವುದಿಲ್ಲ. ಇದೇ ಸಮಸ್ಯೆ. ಇಸ್ರೇಲ್ ಅಸ್ತಿತ್ವವನ್ನು ಒಪ್ಪಿ ನೆರೆಯ ಪ್ಯಾಲೆಸ್ಟೇನ್ ದೇಶದಲ್ಲಿ ಬದುಕಲು ಜನರು ಸಿದ್ಧವಾಗದ ಹೊರತು ಈ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇಲ್ಲ.
ಗಾಜಾ ವಿಚಾರದಲ್ಲಿ ಈಗ ಆಗಿರುವ ಕದನವಿರಾಮ ಮೂರು ಹಂತಗಳಲ್ಲಿ ಜಾರಿಯಾಗಲಿದೆ. ಆರು ವಾರಗಳ ಕಾಲದ ಮೊದಲ ಹಂತ ನಾಳೆಯಿಂದ ಆರಂಭವಾಗಲಿದೆ. ಈ ಹಂತದಲ್ಲಿ ಇಸ್ರೇಲ್‌ನ ೩೩ ಒತ್ತೆಯಾಳುಗಳನ್ನು ಹಮಾಸ್ ಸಂಘಟನೆ ಬಿಡುಗಡೆ ಮಾಡಲಿದೆ. ಮುಖ್ಯವಾಗಿ ಅಸ್ವಸ್ಥರು, ಮಹಿಳೆಯರು, ಮಕ್ಕಳು, ಐವತ್ತು ವರ್ಷಕ್ಕೂ ಹೆಚ್ಚಿನ ವಯಸ್ಸಿನವರು ಬಿಡುಗಡೆಯಾಗಲಿದ್ದಾರೆ. ಇದಕ್ಕೆ ಪ್ರತಿಯಾಗಿ ಜೈಲಿನಲ್ಲಿರುವ ನೂರು ಮಂದಿ ಪ್ಯಾಲೆಸ್ಟೇನ್ ಜನರನ್ನು ಇಸ್ರೇಲ್ ಬಿಡುಗಡೆ ಮಾಡಲಿದೆ. ಒಬ್ಬ ಇಸ್ರೇಲ್ ಒತ್ತೆಯಾಳು ಬಿಡುಗಡೆಗೆ ಮೂವತ್ತು ಮಂದಿ ಪ್ಯಾಲೆಸ್ಟೇನ್ ಬಂದಿಗಳ ಬಿಡುಗಡೆ, ಒಬ್ಬ ಮಹಿಳಾ ಯೋಧೆಯ ಬಿಡುಗಡೆಗೆ ೫೦ ಮಂದಿ ಪ್ಯಾಲೆಸ್ಟೇನ್ ಬಂದಿಗಳ ಬಿಡುಗಡೆ ಮಾಡಬೇಕೆಂದು ಒಪ್ಪಂದವಾಗಿದೆ. ಜೊತೆಯಲ್ಲಿಯೇ ಗಾಜಾ ಪ್ರದೇಶದಿಂದ ಇಸ್ರೇಲ್ ತನ್ನ ಸೈನಿಕರನ್ನು ಹಂತ ಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸುತ್ತದೆ. ಗಾಜಾ ಮತ್ತು ಇಸ್ರೇಲ್ ನಡುವೆ ಯಾರಿಗೂ ಸೇರದ ಪ್ರದೇಶವೊಂದನ್ನು ಇಸ್ರೇಲ್ ಈಗಾಗಲೇ ರೂಪಿಸಿದೆ. ಆ ಪ್ರದೇಶದ ಗಡಿಯಲ್ಲಿ ಇಸ್ರೇಲ್ ಸೇನೆ ಇರಲಿದೆ. ಜೊತೆಗೆ ಇನ್ನೂ ಕೆಲವು ಸೂಕ್ಷ್ಮ ಪ್ರದೇಶಗಳಿಂದ ಇಸ್ರೇಲ್ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಹೀಗಾಗಿ ಉಗ್ರರನ್ನು ಪುನರ್ ಸಂಘಟಿಸುವ ಪ್ರಯತ್ನವನ್ನು ಹಮಾಸ್ ಮಾಡಿದರೆ ಇಸ್ರೇಲ್ ಮತ್ತೆ ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಯುದ್ಧದಿಂದ ೪೬ ಸಾವಿರ ಜನರು ಸತ್ತು ಒಂದು ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕನಿಷ್ಠ ೨೩ ಲಕ್ಷ ಜನರು ಆಶ್ರಯ ಕಳೆದುಕೊಂಡಿದ್ದು ಎಲ್ಲೆಲ್ಲೋ ನೆಲೆಸಿದ್ದಾರೆ. ಅವರು ತಮ್ಮ ತಮ್ಮ ಪ್ರದೇಶಗಳಿಗೆ ಹಿಂತಿರುಗಲಿದ್ದಾರೆ. ಆದರೆ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಅವರಿಗೆ ಎಷ್ಟು ಕಾಲ ಹಿಡಿಯುತ್ತದೋ ಊಹಿಸಲು ಸಾಧ್ಯವಿಲ್ಲ. ನಿರಾಶ್ರಿತರಿಗೆ ಕುಡಿಯುವ ನೀರು, ಔಷಧ, ಆಹಾರದ ಅಭಾವ ದೊಡ್ಡ ಸಮಸ್ಯೆಯಾಗಿದೆ. ವಿಶ್ವದ ನಾನಾ ದೇಶಗಳು, ವಿಶ್ವಸಂಸ್ಥೆ ಅಪಾರ ಪ್ರಮಾಣದಲ್ಲಿ ನೀರು, ಔಷಧ, ಆಹಾರ ಸಾಮಗ್ರಿಗಳನ್ನು ಗಾಜಾ ಪ್ರದೇಶಕ್ಕೆ ರವಾನೆ ಮಾಡಿದೆ. ಆದರೆ ಆ ಸಾಮಗ್ರಿಯನ್ನು ಹೊತ್ತ ಟ್ರಕ್ಕುಗಳು ಯುದ್ಧಪೀಡಿತ ಪ್ರದೇಶ ಪ್ರವೇಶಿಸಲು ಸಾಧ್ಯವಾಗಿಲ್ಲ. ಒಂದು ರೀತಿಯಲ್ಲಿ ಇಸ್ರೇಲ್ ಜನರಿಗೆ ಆಹಾರ, ನೀರು, ಔಷಧ ಸಾಮಗ್ರಿ ಸಿಗದಂತೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಹಸಿವೆಯಿಂದ ಜನರು ಸಾಯುವಂತೆ ಮಾಡುವುದು ಇಸ್ರೇಲ್‌ನ ಅಸ್ತ್ರ ಇದ್ದಂತೆ ಕಾಣುತ್ತದೆ. ಸೇನೆ ದಾಳಿಗಳಿಂದ ಸಾವಿರಾರು ಮಕ್ಕಳು, ಮಹಿಳೆಯರು ಸತ್ತಿದ್ದಾರೆ. ಬದುಕುಳಿದವರೂ ಸಾಯುವಂತೆ ಮಾಡುವುದು ಅಮಾನವೀಯ ಎಂದು ಇಸ್ರೇಲ್ ಆಡಳಿತ ಗಾರರಿಗೆ ಅನ್ನಿಸಿಲ್ಲ. ಈಗ ಆಗಿರುವ ಕದನ ವಿರಾಮ ಒಪ್ಪಂದದಿಂದಾಗಿ ಆಹಾರ ಸಾಮಗ್ರಿ ಹೊತ್ತ ಟ್ರಕ್ಕುಗಳು ಗಾಜಾ ಪ್ರದೇಶವನ್ನು ಪ್ರವೇಶಿಸಲಿವೆ. ಮೊದಲ ಹಂತ ಮುಗಿಯುತ್ತಿರುವಂತೆಯೇ ಮುಂದಿನ ಕ್ರಮಗಳ ಬಗ್ಗೆ ಸಂಧಾನಕಾರರು ಮತ್ತೆ ಮಾತುಕತೆ ಆರಂಭಿಸಲಿದ್ದಾರೆ. ಕದನವಿರಾಮ ಜಾರಿಯಲ್ಲಿ ಕಂಡುಬರುವ ಲೋಪಗಳಿಗೆ ಪರಿಹಾರದ ಮಾರ್ಗಗಳನ್ನು ಈ ಹಂತದಲ್ಲಿ ಸಂಧಾನಕಾರರು ಗುರುತಿಸಿ ಮುಂದಿನ ಕ್ರಮ ಸೂಚಿಸಲಿದ್ದಾರೆ.
ಕೊನೆಯ ಹಾಗೂ ಮೂರನೆಯ ಹಂತದಲ್ಲಿ ಯುದ್ಧ ಮತ್ತು ಸಂಘರ್ಷ ಸಂಪೂರ್ಣವಾಗಿ ಅಂತ್ಯವಾಗುವ ದಿಸೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಹಮಾಸ್ ಸಂಘಟನೆ ಇಸ್ರೇಲ್‌ನ ಉಳಿದ ಒತ್ತೆಯಾಳು ಗಳನ್ನು ಬಿಡುಗಡೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಒಂದು ಸಾವಿರ ಪ್ಯಾಲೆಸ್ಟೇನ್ ಬಂದಿಗಳನ್ನು ಜೈಲುಗಳಿಂದ ಬಿಡುಗಡೆ ಮಾಡಲಿದೆ. ಜೈಲಿನಲ್ಲಿ ೧೫ ವರ್ಷಗಳಿಂದ ಜೈಲಿನಲ್ಲಿರುವ ಪ್ಯಾಲೆಸ್ಟೇನ್ ಬಂದಿಗಳನ್ನು ಬಿಡುಗಡೆ ಮಾಡಲಾಗುವುದು. ಕೊಲೆ ಮತ್ತು ಕ್ರಿಮಿನಲ್ ಅಪರಾಽಗಳ ಬಿಡುಗಡೆ ಇಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. ೨೦೨೩ರ ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ೧೨೦೦ ಜನರು ಸತ್ತಿದ್ದರು. ೨೫೧ ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದರು. ಕಳೆದ ವರ್ಷ ನಡೆಸಿದ ಸಂಧಾನದ ನಂತರ ಸುಮಾರು ನೂರು ಮಂದಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಈಗ ಎಷ್ಟು ಒತ್ತೆಯಾಳುಗಳು ಬದುಕಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಸುಮಾರು ೬೦ ಮಂದಿ ಬದುಕುಳಿದಿರಬಹುದು ಎಂದು ಅಂದಾಜು ಮಾಡಲಾಗಿದೆ.
ಒಪ್ಪಂದದ ಮೂರನೆಯ ಹಂತದಲ್ಲಿಯೇ ಗಾಜಾ ಪುನರ್ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಕತಾರ್, ಈಜಿಪ್ಟ್ ಮತ್ತು ವಿಶ್ವಸಂಸ್ಥೆ ಈ ಕಾರ್ಯದ ನೇತೃತ್ವ ವಹಿಸಲಿವೆ. ಗಾಜಾ ಬಹುಪಾಲು ನಾಶವಾಗಿದ್ದು ಅಲ್ಲಿ ಜನ ವಾಸಮಾಡುವುದೇ ಕಷ್ಟ ಎನ್ನುವ ಸ್ಥಿತಿ ಇದೆ. ಧ್ವಂಸವಾದ ಕಟ್ಟಡಗಳ ಅವಶೇಷಗಳನ್ನು ತೆಗೆಯಲೇ ಹತ್ತಾರು ವರ್ಷ ಬೇಕಾಗಬಹುದು. ಇನ್ನು ನಿರ್ಮಾಣ ಎಷ್ಟು ವರ್ಷ ಹಿಡಿಯುತ್ತದೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಪುನರ್ ನಿರ್ಮಾಣಕ್ಕೆ ನೆರವಾಗಲು ಹಲವು ದೇಶಗಳು ಮುಂದೆ ಬಂದಿವೆ, ಆದರೆ ಇದರಲ್ಲಿ ಅಮೆರಿಕ ಮತ್ತು ಇಸ್ರೇಲ್‌ನ ಪಾತ್ರ ಏನು ಎಂಬುದು ತಿಳಿದಿಲ್ಲ. ಗಾಜಾ ನಾಶ ಮಾಡಿದ್ದೇ ಅಮೆರಿಕ ಮತ್ತು ಇಸ್ರೇಲ್. ಪುನರ್‌ನಿರ್ಮಾಣದ ಜವಾಬ್ದಾರಿಯನ್ನು ಈ ಎರಡೂ ದೇಶಗಳು ಹೊರಲೇಬೇಕಾಗುತ್ತದೆ.
“ಗಾಜಾ ವಿಚಾರದಲ್ಲಿ ಈಗ ಆಗಿರುವ ಕದನವಿರಾಮ ಮೂರು ಹಂತಗಳಲ್ಲಿ ಜಾರಿಯಾಗಲಿದೆ. ಆರು ವಾರಗಳ ಕಾಲದ ಮೊದಲ ಹಂತ ನಾಳೆಯಿಂದ ಆರಂಭವಾಗಲಿದೆ. ಈ ಹಂತದಲ್ಲಿ ಇಸ್ರೇಲ್‌ನ ೩೩ ಒತ್ತೆಯಾಳುಗಳನ್ನು ಹಮಾಸ್ ಸಂಘಟನೆ ಬಿಡುಗಡೆ ಮಾಡಲಿದೆ. ಮುಖ್ಯವಾಗಿ ಅಸ್ವಸ್ಥರು, ಮಹಿಳೆಯರು, ಮಕ್ಕಳು, ಐವತ್ತು ವರ್ಷಕ್ಕೂ ಹೆಚ್ಚಿನ ವಯಸ್ಸಿನವರು ಬಿಡುಗಡೆಯಾಗಲಿದ್ದಾರೆ. ಇದಕ್ಕೆ ಪ್ರತಿಯಾಗಿ ಜೈಲಿನಲ್ಲಿರುವ ನೂರು ಮಂದಿ ಪ್ಯಾಲೆಸ್ಟೇನ್ ಜನರನ್ನು ಇಸ್ರೇಲ್ ಬಿಡುಗಡೆ ಮಾಡಲಿದೆ. ಒಬ್ಬ ಇಸ್ರೇಲ್ಒತ್ತೆಯಾಳು ಬಿಡುಗಡೆಗೆ ಮೂವತ್ತು ಮಂದಿ ಪ್ಯಾಲೆಸ್ಟೇನ್ ಬಂದಿಗಳ ಬಿಡುಗಡೆ, ಒಬ್ಬ ಮಹಿಳಾ ಯೋಧೆಯ ಬಿಡುಗಡೆಗೆ ೫೦ ಮಂದಿ ಪ್ಯಾಲೆಸ್ಟೇನ್ ಬಂದಿಗಳ ಬಿಡುಗಡೆ ಮಾಡಬೇಕೆಂದು ಒಪ್ಪಂದವಾಗಿದೆ.”